ಹಳೆನೇರೆಂಕಿ: ಸತ್ತ ಮಂಗ ಪತ್ತೆ ಜನರಲ್ಲಿ ಖಾಯಿಲೆ ಭೀತಿ ►ಇಲಾಖಾಧಿಕಾರಿಗಳ ಭೇಟಿಪರಿಶೀಲನೆ ತಪಾಸಣೆಗಾಗಿ ಮಂಗನ ಅಂಗಾಂಗ ಶಿವಮೊಗ್ಗಕ್ಕೆ ರವಾನೆ

(ನ್ಯೂಸ್ ಕಡಬ) newskadaba.com. ಹಳೆನೇರೆಂಕಿ,ಜ.17.ರಾಜ್ಯದ ಕೆಲಭಾಗಗಳಲ್ಲಿ ಮಂಗನ ಖಾಯಿಲೆ ಕಾಣಿಸಿಕೊಳ್ಳುತ್ತಿರುವುದು ಸುದ್ದಿಯಾಗುತ್ತಿರುವ ಬೆನ್ನಲ್ಲೇ ಕಡಬ ತಾಲೂಕಿನ ಹಳೆನೇರೆಂಕಿ ಗ್ರಾಮದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಮಂಗವೊಂದು ಸಾವನ್ನಪ್ಪಿದ್ದು ಪರಿಸರದ ಜನರಲ್ಲಿ ಭೀತಿ ಉಂಟುಮಾಡಿದೆ. ಘಟನಾ ಸ್ಥಳಕ್ಕೆ ಆರೋಗ್ಯ, ಪಶುವೈದ್ಯಕೀಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ತಂಡ ಭೇಟಿ ನೀಡಿಮುಂಜಾಗ್ರತಾ ಕ್ರಮ ಕೈಗೊಂಡಿದೆ.ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆನೇರೆಂಕಿ ಗ್ರಾಮದಲ್ಲಿ ಜ.16ರಂದು ಮಂಗವೊಂದು ಮೃತಪಟ್ಟು ಜನರಲ್ಲಿ ಭೀತಿ ಉಂಟುಮಾಡಿದೆ. ಹಳೆನೇರೆಂಕಿ ಗ್ರಾಮದ ಕದ್ರ ನಿವಾಸಿ ಆದಂ ಎಂಬವರ ತೋಟದಲ್ಲಿ ಮಂಗ ಸತ್ತು ಬಿದ್ದಿರುವುದು ಪತ್ತೆಯಾಗಿದೆ.

ಜ.15ರಂದೇ ಈ ಮಂಗ ಅಸ್ವಸ್ಥವಾಗಿ ನಡೆದಾಡಲು ಹಾಗೂ ಅತ್ತಿಂದ ಇತ್ತ ಜಿಗಿಯಲು ಸಾಧ್ಯವಾಗದೇ ಪ್ರಯಾಸಪಡುತ್ತಿತ್ತು. ಸಂಜೆಯ ಹೊತ್ತಿಗೆ ತೋಟದ ತೆಂಗಿನ ಮರದಲ್ಲಿ ಉಳಿದುಕೊಂಡಿದ್ದ ಮಂಗ ಅಲ್ಲೇ ಸಾವನ್ನಪ್ಪಿ ಜ.16ರಂದು ಬೆಳಗ್ಗಿನ ವೇಳೆ ಕೆಳಕ್ಕೆ ಬಿದ್ದಿದೆ ಎಂದು ವರದಿಯಾಗಿದೆ. ಈ ವಿಷಯ ತಿಳಿದ ತೋಟದ ಮಾಲೀಕ ಆದಂರವರು ರಾಮಕುಂಜ ಗ್ರಾಮ ಪಂಚಾಯತಿಗೆ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಆರೋಗ್ಯ, ಪಶುವೈದ್ಯಕೀಯ ಹಾಗೂ ಅರಣ್ಯ ಇಲಾಖಾಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಮಂಗನ ಖಾಯಿಲೆ ತಪಾಸನೆಗಾಗಿಯೇ ರಚಿಸಿರುವ ಮಂಗನ ಖಾಯಿಲೆ ಉಜಿರೆ ಘಟಕದ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಸತ್ತು ಬಿದ್ದಿದ್ದ ಮಂಗನ ಮೃತ ದೇಹವನ್ನು ಪರಿಶೀಲನೆ ನಡೆಸಿದರು.

ಬಳಿಕ ಮೃತ ಮಂಗದ ದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಅಧಿಕಾರಿಗಳು ಅದರ ಮೆದುಳು, ಹೃದಯ, ಕಿಡ್ನಿ ಮುಂತಾದ ಅಂಗಗಳನ್ನು ತೆಗೆದು ಶಿವಮೊಗ್ಗದಲ್ಲಿರುವ ಮಂಗನ ಖಾಯಿಲೆ ತಪಾಸಣಾ ಕೇಂದ್ರಕ್ಕೆ ಪರೀಕ್ಷೆಗಾಗಿ ಕಳುಹಿಸಿದ್ದಾರೆ ಎಂದು ವರದಿಯಾಗಿದೆ. ಬಳಿಕ ಮೃತ ಮಂಗದ ದೇಹವನ್ನು ಸುಟ್ಟು ಅದರ ಬೂದಿಯನ್ನು ಮಣ್ಣಿನಡಿಯಲ್ಲಿ ಹಾಕಲಾಗಿದೆ. ಮಂಗ ಸತ್ತು ಬಿದ್ದ ಐವತ್ತು ಮೀಟರ್ ಸುತ್ತಲತೆಯಲ್ಲಿ ಉಣುಗುಗಳ ನಾಶಕ್ಕಾಗಿ ಮೆಲಾಥಿನ್ ಪುಡಿಯನ್ನು ಸಿಂಪಡಿಸಲಾಗಿದೆ. ಅಲ್ಲದೇ ಮಂಗನ ಖಾಯಿಲೆಯ ಬಗ್ಗೆ ಅರಿವು ಮೂಡಿಸುವ ಕರಪತ್ರಗಳನ್ನು ವಿತರಿಸಿ ಪರಿಸರದ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.ಬೆಳ್ತಗಡಿ ತಾಲೂಕಿನ ಉಜಿರೆ ಮಂಗನ ಖಾಯಿಲೆ ಘಟಕದ ಅಧಿಕಾರಿಗಳಾದ ಸ್ವತಂತ್ರ ರಾವ್, ಭರತೇಶ್, ಅಶೋಕ್, ಕೊೈಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕೃಷ್ಣಾನಂದ, ಕಡಬ ಪಶುವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಅಜಿತ್, ಹಿರಿಯ ಪರಿವೀಕ್ಷಕ ಅಶೋಕ್ ಗೋಕುಲನಗರ, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಆರ್.ಕೆ, ಪಿಡಿಒ ಜೆರಾಲ್ಡ್ ಮಸ್ಕರೇನಸ್ ಮತ್ತಿರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಮೀನುಗಾರಿಕೆ : ಮೀನಿನ ಕನಿಷ್ಟ ಗಾತ್ರ ನಿಗದಿ

ಜನರಲ್ಲಿ ಆತಂಕ:
ಹಲವು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನಲ್ಲಿ ಮಂಗನ ಖಾಯಿಲೆ ಪ್ರಾರಂಭವಾದಾಗ ಕೊಕ್ಕಡ ಭಾಗದಲ್ಲಿಯೂ ಈ ಖಾಯಿಲೆ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಹಳೆನೇರೆಂಕಿ ಭಾಗದ ಶಿವಾರು ಮಲೆಯಲ್ಲಿ ಕೂಡಾ ಮಂಗಗಳು ಸಾವನ್ನಪ್ಪಿದ್ದವು. ಇದೀಗ ಶಿವಾರು ಮಲೆ ಅರಣ್ಯ ಭಾಗಕ್ಕೆ ಹೊಂದಿಕೊಂಡಿರುವ ಹಳೆನೇರೆಂಕಿ ಗ್ರಾಮದಲ್ಲಿ ಮಂಗವೊಂದು ಸತ್ತುಹೋಗಿರುವುದು ಈ ಭಾಗದ ಜನರಲ್ಲಿ ಆತಂಕ ಉಂಟು ಮಾಡಿದೆ. ಕೆಲ ದಿನಗಳ ಹಿಂದೆ ಕಡಬ ಹಾಗೂ ಹೊಸಮಠ ಸಮೀಪದ ಅರಣ್ಯದಲ್ಲಿ ಮಂಗ ಸತ್ತು ಹೋಗಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಾಗ ಮಂಗಗಳ ಅಸ್ಥಿಪಂಜರ ಮಾತ್ರ ಸಿಕ್ಕಿ ಅದನ್ನು ಪರೀಕ್ಷೆಗೆ ಒಳಪಡಿಸಲು ಸಾಧ್ಯವಾಗಿರಲಿಲ್ಲ ಎನ್ನುವ ವಿಚಾರ ಈಗ ತಡವಾಗಿ ಬೆಳಕಿಗೆ ಬಂದಿದೆ.

15 ದಿನದಲ್ಲಿ ವರದಿ ಕೈಸೇರಲಿದೆ:
ಸತ್ತು ಬಿದ್ದಿದ್ದ ಮಂಗದ ಅಂಗಾಂಗಳನ್ನು ತೆಗೆದು ಇಲಾಖೆಯ ಸಿಬ್ಬಂದಿಯೋರ್ವರ ಮೂಲಕ ಶಿವಮೊಗ್ಗದಲ್ಲಿರುವ ಮಂಗನ ಖಾಯಿಲೆ ತಪಾಸಣಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ವರದಿ ಬರಲು ಕನಿಷ್ಠ 15 ದಿನಗಳು ಬೇಕಾಗಿದೆ. ವರದಿಯಲ್ಲಿ ಮಂಗನ ಖಾಯಿಲೆ ಇರುವುದು ದೃಢಪಟ್ಟಲ್ಲಿ ಪರಿಸರದ ನಿವಾಸಿಗಳಿಗೆ ಖಾಯಿಲೆ ನಿರೋಧಕ ಚುಚ್ಚು ಮದ್ದು ನೀಡಲಾಗುವುದು. ಅಲ್ಲಿಯ ತನಕ ಇಲಾಖೆಯ ವತಿಯಿಂದಲೂ ಮುಂಜಾಗೃತ ಕ್ರಮ ಕೈಗೊಳ್ಳುತ್ತೇವೆ. ಪರಿಸರದ ನಿವಾಸಿಗಳಲ್ಲಿ ಜ್ವರ ಕಾಣಿಸಿಕೊಂಡಲ್ಲಿ ಅವರಿಗೆ ಸರಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದೆ. ಮಂಗ ಸತ್ತುಬಿದ್ದ ಪರಿಸರದ ಮನೆಯವರು ತೋಟ, ಗುಡ್ಡೆಗೆ ಹೋಗುವ ವೇಳೆ ಕೈ, ಕಾಲುಗಳಿಗೆ ಕಹಿ ಬೇವಿನ ಎಣ್ಣೆ ಅಥವಾ ಇಲಾಖೆಯಿಂದ ನೀಡಲಾಗುವ ಡಿಎಂಪಿ ಆಯಿಲ್ ಹಚ್ಚಿಕೊಂಡು ಹೋಗಬೇಕು. ಡಿಎಂಪಿ ಆಯಿಲ್ ಆರೋಗ್ಯ ಇಲಾಖೆಯಲ್ಲಿ ಲಭ್ಯವಿದೆ.
ಡಾ.ಕೃಷ್ಣಾನಂದ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಕೊೈಲ

Also Read  ದಡಾರ ರುಬೆಲ್ಲಾ ನಿರ್ಮೂಲನಾ ಲಸಿಕಾ ಕಾರ್ಯಕ್ರಮ

 

ಸತ್ತ ಮಂಗನ ಮೇಲಿದ್ದಉಣುಗು ಕಚ್ಚಿದಲ್ಲಿ ಖಾಯಿಲೆ:
ಮಂಗನ ಖಾಯಿಲೆ ಮನುಷ್ಯನಿಂದ ಮನುಷ್ಯನಿಗೆ ಹರುಡುವುದಿಲ್ಲ. ಖಾಯಿಲೆಯಿಂದ ಸತ್ತುಬಿದ್ದ ಮಂಗನ ದೇಹದಲ್ಲಿದ್ದ ಸಣ್ಣ ಸಣ್ಣ ಗಾತ್ರ ಉಣುಗುಗಳು ಪರಿಸರದಲ್ಲಿ ಹರಡಿ ಮನುಷ್ಯನ ದೇಹಕ್ಕೆ ಕಚ್ಚಿದಲ್ಲಿ ಈ ಖಾಯಿಲೆ ಹರಡುತ್ತದೆ. ಆದ್ದರಿಂದ ಮಂಗಗಳು ಸಾಯುತ್ತಿರುವ ಪ್ರದೇಶಕ್ಕೆ ಹೋಗುವ ವೇಳೆ ಆರೋಗ್ಯ ಇಲಾಖೆಯಿಂದ ಕೊಡುವ ಡಿಎಂಪಿ ಎಣ್ಣೆಯನ್ನು ಕೈಕಾಲುಗಳಿಗೆ ಹಚ್ಚಿಕೊಂಡು ಹೋಗಬೇಕು. ಕಾಡಿನಿಂದ ಬಂದ ಕೂಡಲೇ ಸಾಬೂನು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಕಚ್ಚಿಕೊಂಡ ಉಣುಗುಗಳು ಉದುರಿಹೋಗುತ್ತವೆ. ಈ ವೈರಸ್ ಕಾಡಿನಲ್ಲಿರುವ ಕೆಲವು ಪ್ರಾಣಿಗಳಲ್ಲಿ ಇದ್ದು ಇವುಗಳ ಮೈಮೇಲಿರುವ ಉಣ್ಣೆಗಳಲ್ಲಿ ಪ್ರವೇಶಿಸುತ್ತವೆ. ಈ ಉಣ್ಣೆಗಳು ಇತರ ಪ್ರಾಣಿಗಳಿಗೆ, ಮಂಗಗಳಿಗೆ ಮತ್ತು ಮನುಷ್ಯರಿಗೆ ಕಚ್ಚುವುದರಿಂದ ಖಾಯಿಲೆ ಬರುತ್ತದೆ. ಖಾಯಿಲೆಗೆ ತುತ್ತಾದವರಿಗೆ ಎಂಟು ಹತ್ತು ದಿನಗಳ ತನಕ ಬಿಡದೇ ಜ್ವರ ಬರುತ್ತದೆ. ವಿಪರೀತ ತಲೆನೋವು, ಕೈಕಾಲು ಮತ್ತು ಸೊಂಟನೋವು. ವಿಪರೀತ ನಿಶ್ಯಕ್ತಿ, ಕಣ್ಣುಗಳು ಕೆಂಪಾಗುವುದು, ಜ್ವರ ಬಂದ ನಾಲ್ಕಾರು ದಿನದ ನಂತರ ಮೂಗು,ಬಾಯಿ, ಗುದದ್ವಾರದಿಂದ ರಕ್ತಸ್ರಾವವೂ ಆಗಬಹುದು. ಮಂಗನ ಖಾಯಿಲೆ ನಿಯಂತ್ರಿಸುವ ಲಸಿಕೆ ಬಂದಿದ್ದು ಇದನ್ನು 6 ವರ್ಷದ ಮೇಲ್ಪಟ್ಟ ಎಲ್ಲರಿಗೂ ಎರಡು ವರಸೆಗಳಲ್ಲಿ ಒಂದು ತಿಂಗಳ ಅಂತರದಲ್ಲಿ ನೀಡಲಾಗುತ್ತದೆ. ಎರಡನೇ ಚುಚ್ಚುಮದ್ದು ಹಾಕಿಸಿಕೊಂಡ 70 ದಿನಗಳ ನಂತರವೇ ರೋಗ ನಿರೋಧಕ ಶಕ್ತಿ ಬರುತ್ತದೆ ಎಂದು ಆರೋಗ್ಯ ಇಲಾಖೆ ವತಿಯಿಂದ ಹಂಚಲಾದ ಕರಪತ್ರದಲ್ಲಿ ಮಾಹಿತಿ ನೀಡಲಾಗಿದೆ.

Also Read  ಕಂದಾಯ ಇಲಾಖೆ ನೌಕರರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ

error: Content is protected !!
Scroll to Top