ಚಳಿಗಾಲದಲ್ಲಿ ಅಬ್ಬರಿಸುವ ಅಸ್ತಮಾ ಖಾಯಿಲೆ✍? ಡಾ| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com ಕಡಬ, ಜ.15. ಅಸ್ತಮಾ ಎನ್ನುವುದು ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದೆ. ಶ್ವಾಸಕೋಶಗಳು) ನಮ್ಮ ದೇಹದ ಅತ್ಯಂತ ಕ್ರಿಯಾತ್ಮಕವಾದ ಅಂಗವಾಗಿದ್ದು ದೇಹದ ಎಲ್ಲಾ ಜೀವಕೋಶಗಳಿಗೆ ಅತೀ ಅಗತ್ಯವಾದ ‘ಅಕ್ಸಿಜನ್’ (ಆಮ್ಲಜನಕ)ನ ಪೂರೈಕೆಯನ್ನು ಮಾಡುವ ಗುರುತರವಾದ ಜವಬ್ದಾರಿಯನ್ನು ಹೊಂದಿರುತ್ತದೆ. ನಾವು ಮೂಗಿನ ಮೂಲಕ ಒಳಗೆಳೆದುಕೊಂಡ ಗಾಳಿ ಶ್ವಾಸನಾಳಗಳು ಅಥವಾ ಶ್ವಾಸಮಾರ್ಗಗಳ ಮೂಲಕ ಶ್ವಾಸಕೋಶಕ್ಕೆ ತಲುಪುತ್ತದೆ. ಶ್ವಾಸಕೋಶಗಳಲ್ಲಿರುವ ಚಿಕ್ಕ ಚಿಕ್ಕ ಗಾಳಿಚೀಲಗಳ ಮುಖಾಂತರ ನಾವು ಸೇವಿಸಿದ ಗಾಳಿಯಲ್ಲಿನ ಆಮ್ಲಜನಕ ಶ್ವಾಸಕೋಶದ ಒಳಗಿರುವ ರಕ್ತನಾಳಗಳ ಒಳಗೆ ಸೇರಿಕೊಂಡು ದೇಹದ ಇತರ ಎಲ್ಲಾ ಅಂಗಾಂಗಗಳಿಗೆ, ಜೀವಕೋಶಗಳಿಗೆ ರಕ್ತದ ಮುಖಾಂತರ ಆಮ್ಲಜನಕದ ಪೂರೈಕೆಯಾಗುತ್ತಲಿರುತ್ತದೆ. ಈ ಆಮ್ಲಜನಕದ ಪೂರೈಕೆಯಲ್ಲಿ ಸ್ವಲ್ಪವಾದರೂ ವ್ಯತ್ಯಾಸವಾದಲ್ಲಿ ಉಸಿರಾಟದ ತೊಂದರೆ ಉಂಟಾಗಿ ಮನುಷ್ಯನಿಗೆ ಚಡಪಡಿಕೆ ಉಂಟಾಗುತ್ತದೆ. ಅಸ್ತಮಾ ಎನ್ನುವ ರೋಗ ಮುಖ್ಯವಾಗಿ ಈ ಶ್ವಾಸನಾಳಗಳಿಗೆ ಮತ್ತು ಶ್ವಾಸಕೋಶದ ಚಿಕ್ಕಚಿಕ್ಕ ಗಾಳಿಚೀಲಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗವಾಗಿದ್ದು ಸುದೀರ್ಘ ಕಾಲದ ಚಿಕಿತ್ಸೆ ಮತ್ತು ನಿರಂತರವಾದ ಆರೈಕೆ ಅತೀ ಅವಶ್ಯಕ.

ಜಾಗತಿಕವಾಗಿ ಸರಿ ಸುಮಾರು 200 ದಶ ಲಕ್ಷ ಜನರು ಅಸ್ತಮಾ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತದೆ. ಮತ್ತು ವರ್ಷ ಒಂದರಲ್ಲಿ ಸುಮಾರು 0.2 ದಶಲಕ್ಷ ಜನರು ಅಸ್ತಮಾದಿಂದ ಮರಣ ಹೊಂದುತ್ತಾರೆ. ಭಾರತ ದೇಶದಲ್ಲಿ ಸುಮರು 15ದಶಲಕ್ಷ ಮಂದಿ ಅಸ್ತಮಾ ರೋಗಿಗಳು ಇದ್ದಾರೆ ಎಂದು ತಿಳಿದು ಬಂದಿದೆ. ವಾತಾವರಣದ ಕಾರಣಗಳು ಮತ್ತು ವಂಶವಾಹಿನಿ ಕಾರಣಗಳು ಸಂಯುಕ್ತವಾಗಿ ಅಸ್ತಮಾ ರೋಗಕ್ಕೆ ಕಾರಣವಾಗಿದೆ. ಪರಿಸರ ಮತ್ತು ಜೈವಿಕ ಕಾರಣದಿಂದಾಗಿ ಅಸ್ತಮಾ ರೋಗಿಗಳ ಶ್ವಾಸ ಮಾರ್ಗವೂ ಉರಿಯೂತದಿಂದ ಕೂಡಿರುತ್ತದೆ. ರೋಗಿಯು ತನಗೆ ಬಹಳ ಸಂವೇಧನಾ ಕಾರಕವಾಗಿರುವ ಅಲರ್ಜಿಕಾರಕ ವಸ್ತುಗಳನ್ನು ಶ್ವಾಸೋಛ್ಛಾಸ ಮಾಡಿದಾಗ ಉರಿಯೂತವನ್ನು ಮತ್ತಷ್ಟು ಕೆರಳಿಸುತ್ತದೆ. ಹೀಗಾದಾಗ ಶ್ವಾಸಮಾರ್ಗಗಳ ಉರಿಯೂತವು ಶ್ವಾಸಮಾರ್ಗದ ವಾಯು ಸಂಚಲನಕ್ಕೆ ಸಂಚಕಾರ ಮಾಡಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ಶೀತ ಗಾಳಿ, ವೈರಾಣುಗಳು ಅಲರ್ಜಿ ಕಾರಕ ವಸ್ತುಗಳಾದ ಧೂಳು, ಮರಳು, ನಾರು ಅಥವಾ ಇನ್ನಾವುದೇ ಕಾರಣಗಳು ಶ್ವಾಸಮಾರ್ಗದ ಉರಿಯೂತವನ್ನು ಹೆಚ್ಚಾಗಿಸಿ ಅಸ್ತಮಾ ರೋಗ ಉಲ್ಬಣಿಸುವಂತೆ ಮಾಡುತ್ತದೆ.

 

ಅಸ್ತಮಾ ರೋಗದ ಲಕ್ಷಣಗಳು
1. ಉಬ್ಬಸ ಅಥವಾ ಉಸಿರಾಡುವ ಸಮಯದಲ್ಲಿ ಗೊರ ಗೊರ ಸದ್ದುಕೇಳಿಸುವುದು ಅಥವಾ ಉಸಿರಾಡುವಾಗ ಸಿಳ್ಳೆ ಹಾಕಿದಂತೆ ಸದ್ದು ಬರುವುದು.
2. ಎದೆ ಬಿಗಿಹಿಡಿತ, ಉಸಿರು ಕಿರಿದಾಗುವುದು, ಉಸಿರಾಡಲು ಕಷ್ಟವಾಗುವುದು
3. ವಿಪರೀತವಾದ ದೀರ್ಘಕಾಲಿಕ ಕೆಮ್ಮು
4. ವಿಪರೀತ ಮತ್ತು ನಿರಂತರ ಕೆಮ್ಮಿನಿಂದಾಗಿ ನಿದ್ರಾಹೀನತೆ, ಅಶಕ್ತಿ ಮತ್ತು ಅಸಹನೆ ನಿರುತ್ಸಾಹ… ಆಟೋಟ ಮತ್ತು ಇತರ ಚಟುವಟಿಕೆಗಳಿಂದ ದೂರ ಇರುವುದು ಇತ್ಯಾದಿ.

 

ಅಸ್ತಮಾ ಅಘಾತ
ಅಸ್ತಮಾ ರೋಗದಿಂದ ಬಳಲುತ್ತಿರುವವರು ದೈನಂದಿನ ಚಟುವಟಿಕೆಗಳನ್ನು ಅತಿಯಾಗಿ ಕಾಳಜಿ ವಹಿಸಬೇಕಾಗುತ್ತದೆ. ಅಲರ್ಜಿ ಕಾರಕ ವಸ್ತುಗಳಿಗೆ ಒಡ್ಡಿಕೊಂಡಾಗ ಅಸ್ತಮಾ ಕೆರಳುತ್ತದೆ. ಧೂಳಿನ ಕಣಗಳು, ಪರಾಗದ ಕಣಗಳು, ಸಾಕುಪ್ರಾಣಿಗಳ ರೋಮಗಳು, ಹುರುಪೆಗಳು ಇತ್ಯಾದಿಗಳು ಹೆಚ್ಚಾಗಿ ಅಸ್ತಮಾ ಅಲರ್ಜಿಕಾರಕ ವಸ್ತಗಳಾಗಿರುತ್ತದೆ. ಕೆಲವೊಮ್ಮೆ ಅಲರ್ಜಿಕಾರಕ ವಸ್ತುಗಳಲ್ಲದೆ ಶೀತಗಾಳಿ/ತಂಪುಗಾಳಿ, ವಾಯುಮಾಲಿನ್ಯ, ಹೊಗೆ ವಿಪರೀತ ಒತ್ತಡ ಶೀತ ಪದಾರ್ಥ ಸೇವನೆ ಅಜೀರ್ಣವಾದಾಗ ಆಹಾರದಲ್ಲಿ ವಿಷಬೆರಕೆ ಆದಾಗ ಕಲಬೆರಕೆ ಆದಾಗ ಕೂಡಾ ಅಸ್ತಮಾ ರೋಗ ಕೆರಳುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ದೈಹಿಕ ವ್ಯಾಯಾಮದ ಬಳಿಕವೂ ಅಸ್ತಮಾ ಅಘಾತ ಉಂಟಾಗಬಹುದು. ಈ ರೀತಿ ಅಸ್ತಮಾ ಕೆರಳಿದಾಗ ಶ್ವಾಸ ಮಾರ್ಗದ ಸುತ್ತಲಿರುವ ಸ್ನಾಯುಗಳು ಬಿಗಿಯಾಗಿ ಸೆಟೆದು ನಿಲ್ಲುತ್ತದೆ. ಶ್ವಾಸ ಮಾರ್ಗದ ಸುತ್ತಳತೆ ಕಡಿಮೆಯಾಗಿ ಗಾಳಿಯ ಸಂಚಲನೆ ಕುಂಠಿತವಾಗ ಬಹುದು. ಅದೇ ರೀತಿ ಶ್ವಾಸ ಮಾರ್ಗದೊಳಗಿನ ಒಳಪದರ ಊದಿಕೊಂಡು ಉರಿಯೂತ ಉಲ್ಬಣಿಸುತ್ತದೆ ಮತ್ತು ಶ್ವಾಸ ಮಾರ್ಗದಲ್ಲಿ ಲೊಳೆಯ ಉತ್ಪನ್ನ ಜಾಸ್ತಿಯಾಗಿ ಗಾಳಿಯ ಸಂಚಾರಕ್ಕೆ ಮತ್ತಷ್ಟು ಸಂಚಕಾರ ತರುತ್ತದೆ. ಹೀಗೆ ಗಾಳಿಯ ಸಂಚಾರವಿಲ್ಲದಾಗ ಆಮ್ಲಜನಕದ ಕೊರತೆಯಾಗಿ ರಕ್ತಕ್ಕೆ ಮತ್ತು ದೇಹದ ಇನ್ನಿತರ ತುರ್ತು ಮತ್ತು ಅನಿವಾರ್ಯ ಅಂಗಾಂಗಗಳಾದ ಮೆದುಳು ಕಿಡ್ನಿಗಳಿಗೆ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸ ಉಂಟಾಗಿ ಮಾರಣಾಂತಿಕವಾಗಿ ಪರಿಣಮಿಸಲೂಬಹುದು.ಅಸ್ತಮಾ ರೋಗಕ್ಕೆ ಪರಿಹಾರ ಅಥವಾ ಸಂಪೂರ್ಣ ಚಿಕಿತ್ಸೆ ಇಲ್ಲವಾದ ಕಾರಣದಿಂದ ಪರಿಣಾಮಕಾರಿ ಚಿಕಿತ್ಸೆ ಮತ್ತು ನಿಯಂತ್ರಣದ ಮುಖಾಂತರ ಅಸ್ತಮಾದ ರೋಗದ ಲಕ್ಷಣಗಳನ್ನು ನಿಯಂತ್ರಿಸಬೇಕು. ವೈದ್ಯರ ಸಲಹೆಯಂತೆ ಸೂಕ್ತ ಕಾಲದಲ್ಲಿ ಸರಿಯಾದ ಔಷಧಿ ಸೇವಿಸುತ್ತಾ ಅಸ್ತಮಾ ಕೆರಳಿಸುವ ವಸ್ತುಗಳಿಂದ ದೂರವಿರುವುದರಲ್ಲಿಯೇ ಜಾಣತನ ಅಡಗಿದೆ.

Also Read  ಗಿರಿಧರ ಭಟ್ ರವರಿಂದ ದಿನ ಭವಿಷ್ಯ ಮಾಹಿತಿ.


ಅಸ್ತಮಾ ಪತ್ತೆ ಹಚ್ಚುವುದು ಹೇಗೆ ?
ಶ್ವಾಸಕೋಶದ ಸಂಬಂಧಿ ರೋಗಿಗಳು ಇರುವವರಿಗೆ “ಸ್ಪೈರೋ ಮೆಟ್ರಿ ಎಂಬ ವಿಶಿಷ್ಟ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ರೋಗಿಗಳು ದೀರ್ಘ ಉಸಿರುಗಳನ್ನು ಎಳೆದುಕೊಂಡು ಪರೀಕ್ಷೆ ಯಂತ್ರದ ಸೆನ್ಸಾರ್ ಪದರದ ಮೇಲೆ ಉಸಿರನ್ನು ಬಿಡಬೇಕು. ಈ ರೀತಿಯಿಂದ ರೋಗಿಗಳು ಉಸಿರನ್ನು ಒಳಗೆ ತೆಗೆದುಕೊಳ್ಳುವ ಮತ್ತು ಹೊರಗೆ ಬಿಡುವ ಪ್ರಮಾಣವನ್ನು ಮಾಪನ ಮಾಡಲಾಗುತ್ತದೆ. ಈ ಪರೀಕ್ಷೆಯಿಂದ ರೋಗಿಯೊಬ್ಬನ ಶ್ವಾಸಕೋಶದಿಂದ ಎಷ್ಟು ಪ್ರಮಾಣದ ಗಾಳಿಯನ್ನು ಸರಬರಾಜು ಮಾಡಲಾಗುತ್ತದೆ ಎಂಬುದನ್ನು ಮಾಪನ ಮಾಡಲಾಗುತ್ತದೆ. ಅಸ್ತಮಾ ಮತ್ತು ಇನ್ನಿತರ ಯಾವುದೇ ಶ್ವಾಸಕೋಶ ಸಂಬಂಧಿ ರೋಗಗಳಿರುವವರಿಗೆ ಸ್ಪೈರೋಮೆಟ್ರಿ ಪರೀಕ್ಷೆಯ ಮುಖಾಂತರ ರೋಗದ ತೀವ್ರತೆ ಮತ್ತು ಚಿಕಿತ್ಸೆಯ ಸ್ಪಂದನ ಹಾಗೂ ಪ್ರಗತಿಯನ್ನು ಅಂದಾಜಿಸಲಾಗುತ್ತದೆ. ಈ ಪರೀಕ್ಷೆಯು ಫಲಿತಾಂಶಕ್ಕೆ ಅನುಗುಣವಾಗಿ ಅಸ್ತಮಾದ ತೀವ್ರತೆಯನ್ನು ನಿರ್ಧರಿಸಿ ಚಿಕಿತ್ಸೆ ಮತ್ತು ಔಷಧಿಯ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. ಅದೇ ರೀತಿ ಅಲರ್ಜಿ ಪರೀಕ್ಷೆಯನ್ನು ನಡೆಸಿ ರೋಗಿಗಳು ಯಾವ ವಸ್ತುಗಳಿಗೆಲ್ಲಾ ಅಲರ್ಜಿಗೊಳಗಾಗುತ್ತಾರೆ ಎಂಬುದನ್ನು ತಿಳಿಯಲಾಗುತ್ತದೆ. ಅಸ್ತಮಾ ರೋಗಕ್ಕೆ ಕಾರಣವಾಗುವ ಅಲರ್ಜಿಕಾರಕ ವಸ್ತುಗಳನ್ನು ಗುರುತಿಸಿ ಅಂತಹಾ ವಸ್ತುಗಳನ್ನು ಸೇವಿಸದಂತೆ ಅಥವಾ ವಸ್ತ್ತುಗಳಿಗೆ ಎದುರಾಗದಂತೆ ಸೂಕ್ತ ಎಚ್ಚರವನ್ನು ವಹಿಸಲಾಗುತ್ತದೆ. ಅದೇ ರೀತಿ ಎದೆಗೂಡಿನ ಎಕ್ಸರೇ, ಮೂಗಿನ ಎಲುಬಿನ ಕ್ಷ ಕಿರಣ, ದೇಹದ ರಕ್ತದಲ್ಲಿನ ಅಲರ್ಜಿಯ ಪ್ರಮಾಣ ಮುಂತಾದ ಪರೀಕ್ಷೆಯ ಮುಖಾಂತರ ರೋಗಿಯನ್ನು ಕುಲಂಕುಷವಾಗಿ ಅಭ್ಯಸಿಸಿದ ಬಳಿಕವೇ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. ಒಂದು ವೇಳೆ ರೋಗಿಯು ಯಾವುದಾದರೂ ವಸ್ತುಗಳಿಗೆ ಅಲರ್ಜಿ ಹೊಂದಿದ್ದಾನೆ ಎಂಬುದು ಪರೀಕ್ಷೆಗಳಿಂದ ಸಾಬಿತಾದಲ್ಲಿ ಅಂತಹ ವಸ್ತುಗಳು ಪುನಃ ಆ ವ್ಯಕ್ತಿಗೆ ಅಸ್ತಮಾ ರೋಗವನ್ನು ಕೆರಳಿಸುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ ಸೂಕ್ತವಾದ ಪರೀಕ್ಷೆ ಮತ್ತು ಎಚ್ಚರಿಕೆಗಳನ್ನು ವಹಿಸುವುದರಿಂದ ಅಸ್ತಮಾ ಕೆರಳುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.

Also Read  ಮಂಗಳೂರು :ಟೋಟಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಗ್ಯಾಸ್ ಘಟಕದಲ್ಲಿ ಅಣುಕು ಕಾರ್ಯಾಚರಣೆ 

ಚಿಕಿತ್ಸೆ ಹೇಗೆ?
ಅಸ್ತಮಾ ಎನ್ನುವುದು ದೀರ್ಘಕಾಲಿಕ ಖಾಯಿಲೆಯಾಗಿದ್ದು ಸಂಪೂರ್ಣವಾಗಿ ರೋಗವನ್ನು ಗುಣಪಡಿಸುವುದು ಸಾಧ್ಯವಿಲ್ಲದ ಮಾತು. ಆದರೆ ಪರಿಣಾಮಕಾರಿಯಾದ ಚಿಕಿತ್ಸೆ ಮತ್ತು ಸೂಕ್ತ ಮಾರ್ಗದರ್ಶನದ ಮೂಲಕ ರೋಗದ ಲಕ್ಷಣಗಳನ್ನು ನಿಯಂತ್ರಿಸಬಹುದು. ವೈದ್ಯರು ಸೂಚಿಸಿದ ಔಷಧಿಗಳನ್ನು ಸೂಕ್ತ ಪ್ರಮಾಣದಲ್ಲಿ ಸಕಾಲದಲ್ಲಿ ಸೇವಿಸಬೇಕು. ಮತ್ತು ಅಸ್ತಮಾದ ಲಕ್ಷಣಗಳನ್ನು ಉದ್ರೇಕಿಸುವ ಅಂಶಗಳಿಂದ ದೂರವಿರುವುದು ಒಳಿತು. ಅಲರ್ಜಿಕಾರಕ ಅಂಶಗಳನ್ನುÀ ಆದಷ್ಟು ತಪ್ಪಿಸಿಕೊಳ್ಳಬೇಕು. ಸಾಮಾನ್ಯವಾಗಿ ಅಸ್ತಮಾ ಚಿಕಿತ್ಸೆಯಲ್ಲಿ ಎರಡು ಬಗೆಯ ಮೂಲ ಔಷಧಗಳನ್ನು ಬಳಸಲಾಗುತ್ತದೆ.

1. ಅಸ್ತಮಾ ಅಘಾತವನ್ನು ತಡೆಯುವ ನಿಯಂತ್ರಣ ಔಷಧಿಗಳು : ಈ ರೀತಿಯ ಔಷಧಿಗಳು ಅಸ್ತಮಾ ರೋಗ ಲಕ್ಷಣಗಳನ್ನು ಪರಿಣಾಮಕಾರಿಯಗಿ ನಿಯಂತ್ರ್ರಿಸುತ್ತದೆ. ಮತ್ತು ಅಸ್ತಮಾ ರೋಗಕ್ಕೆ ಕಾರಣವಾಗಿರುವ ಉರಿಯೂತದಂತಹಾ ತೊಂದರೆಗಳು ಮರುಕಳಿಸದಂತೆ ಮತ್ತು ನಿರಂತರವಾಗಿರದಂತೆ ನಿಯಂತ್ರಿಸುತ್ತದೆ. ಆದರೆ ಅಸ್ತಮಾ ರೋಗದ ಸಂಪೂರ್ಣ ನಿಯಂತ್ರಣಕ್ಕಾಗಿ ರೋಗಿಗಳು ಈ ಔಷಧಿಗಳನ್ನು ಪ್ರತೀ ದಿನ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ರೋಗಿಗಳು ಸಹಜ ಸ್ಥಿತಿಯಲ್ಲಿರುವ ಸಮಯದಲ್ಲಿಯೂ ಈ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಸೇದಬಹುದಾದ ಅಥವಾ ಶ್ವಾಸದ ಮುಖಾಂತರ ಒಳಗೆಳೆದುಕೊಳ್ಳಬಹುದಾದ ಸಿರಾಯ್ಡ್‍ಗಳು ಬಹಳ ಪರಿಣಾಮಕಾರಿಯಾದ ಮತ್ತು ದೀರ್ಘಕಾಲಿಕ ಅಸ್ತಮಾ ನಿಯಂತ್ರಣಕ್ಕಾಗಿ ಬಳಸುವ ಔಷಧಿಯಾಗಿರುತ್ತದೆ. ಈ ರೀತಿ ಔಷಧಿಯ ಬಳಕೆಯಿಂದ ಅಸ್ತಮಾ ರೋಗದ ಲಕ್ಷಣವು ಕಡಿಮೆಯಾಗಿ ಆರೋಗ್ಯ ವೃದ್ಧಿಯಾಗುತ್ತದೆ. ಅಸ್ತಮಾ ತೀವ್ರ ಅಘಾತದ ಪ್ರಮಾಣ ಕಡಿಮೆಯಾಗಿ ಕ್ಷಿಪ್ರ ಉಪಶಮನಕಾರಿ ಔಷಧಿಗಳ ಬಳಕೆ ಕೂಡಾ ಕಡಿಮೆಯಾಗುತ್ತದೆ. ಒಟ್ಟಿನಲ್ಲಿ ಈ ರೀತಿಯ ಔಷಧಿಗಳು ಹೆಚ್ಚು ಅಸ್ತಮಾ ರೋಗವನ್ನು ತಡೆಗಟ್ಟುವಲ್ಲಿ ಮತ್ತು ರೋಗ ಉಲ್ಬಣಗೊಳ್ಳದಂತೆ ತಡೆಯುವ ಕೆಲಸವನ್ನು ಪರಿಣಾಮಕಾರಿಯಾಗಿ ನಡೆಸುತ್ತದೆ.

2. ಕ್ಷಿಪ್ರ ಉಪಶಮನಕಾರಿ ಔಷಧಿಗಳು : ಸಾಮಾನ್ಯವಾಗಿ ಅಸ್ತಮಾ ಅಘಾತದ ಸಂದರ್ಭದ ಈ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ಬಳಸಲಾಗುತ್ತದೆ. ಈ ಔಷಧಿಗಳು ಜೀವ ಸಂರಕ್ಷಣಾ ಔಷಧಿಗಳಾಗಿದ್ದು ಅಸ್ತಮಾ ಕೆರಳಿದ ತಕ್ಷಣ ಉಪಶಮನ ದೊರಕಲು ತೆಗೆದುಕೊಳ್ಳಬೇಕಾಗುತ್ತದೆ. ಈ ಜೀವ ರಕ್ಷಕ ಔಷಧಿಗಳು ಶ್ವಾಸನಾಳಗಳನ್ನು ಹಿಗ್ಗಿಸಿ ಗಾಳಿಯ ಚಲನೆಯನ್ನು ಹೆಚ್ಚಿಸಿ ರೋಗದ ಲಕ್ಷಣಗಳನ್ನು ಕುಗ್ಗಿಸಿ ತ್ವರಿತ ಆರಾಮ ನೀಡುತ್ತದೆ. ಈ ರೀತಿಯ ಕ್ಷಿಪ್ರ ಉಪಶಮನಕಾರಿ ಔಷಧಿಗಳನ್ನು ನಿಯಂತ್ರಕ ಔಷಧಿಗಳ ಬದಲಾಗಿ ತೆಗೆದುಕೊಳ್ಳಬಾರದು. ನಿಮ್ಮ ಔಷಧಿಗಳ ಬಗ್ಗೆ ಯಾವುದೇ ಸಂದೇಹವಿದ್ದಲ್ಲಿ ತಜ್ಞ ವೈದ್ಯರ ಬಳಿ ಸೂಕ್ತ ಮಾರ್ಗದರ್ಶನ ತೆಗೆದುಕೊಂಡಲ್ಲಿ ಉತ್ತಮ. ನೆನಪಿರಲಿ ಪ್ರತಿಯೊಬ್ಬ ಅಸ್ತಮಾ ರೋಗಿಯು ತನ್ನ ಬಳಿ ಈ ಕ್ಷಿಪ್ರ ಉಪಶಮನ ಔಷಧಿಗಳನ್ನು ಇಟ್ಟುಕೊಳ್ಳುವುದು ಅತೀ ಅವಶ್ಯಕ. ಇಲ್ಲವಾದಲ್ಲಿ ಅಪಾಯ ಕಟ್ಟಿಟ ಬುತ್ತಿ.

ತಡೆಗಟ್ಟುವುದು ಹೇಗೆ ?
ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ವ್ಯಕ್ತಿಯು ಯಾವ ಕಾರಣಕ್ಕಾಗಿ ಅಸ್ತಮಾರೋಗಕ್ಕೆ ತುತ್ತಾಗುತ್ತಾನೆ ಎಂಬುದನ್ನು ಅರಿತು ಅಲರ್ಜಿ ಕಾರಕ ವಸ್ತುಗಳನ್ನು ವ್ಯಕ್ತಿಯ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸಬೇಕು. ಉದಾ: ಧೂಳು, ಧೂಮಪಾನದ ಹೊಗೆ, ಆಸ್ಪ್ಪರೀನ್ ಮುಂತಾದ ನೋವು ನಿವಾರಕ ಔಷಧಿಗಳು, ಸಾಕು ಪ್ರಾಣಿಗಳ ರೋಮ, ಅಲರ್ಜಿಕಾರಕ ಆಹಾರ ಪದಾರ್ಥಗಳು. ಚಾಕಲೇಟು ಇತ್ಯಾದಿ. ಜೀವನ ಶೈಲಿಯ ಪರಿವರ್ತನೆಗೆ ಹೆಚ್ಚಿನ ಒತ್ತು ನೀಡಿ ವಾತವರಣದಲ್ಲಿನ ಅಲರ್ಜಿಕಾರಕ ವಸ್ತುಗಳು ಅಥವಾ ರಾಸಾಯನಿಕಗಳ ಸಂಪರ್ಕಕ್ಕೆ ಬರದಂತೆ ಹೆಚ್ಚಿನ ನಿಗಾ ವಹಿಸಲಾಗುತ್ತದೆ.

Also Read  ಬಟ್ಟೆ ಶೋ ರೂಮ್ ನೊಳಗೆ ಅಗ್ನಿ ಅವಘಡ; ಐವರು ಕೆಲಸಗಾರರ ಸಾವು

 

 

ಅಸ್ತಮಾ ರೋಗ ಬಹಳ ಹಳೆಯ ರೋಗವಾಗಿದ್ದು ಪುರಾತನ ಈಜಿಪ್ಟ್ ಇತಿಹಾಸದಲ್ಲಿ 500ಅ ಯ ಸಮಯದಲ್ಲಿಯೂ ದಾಖಲಾದ ಬಗ್ಗೆ ವಿವರಗಳು ಇದೆ. ಆ ಕಾಲದಲ್ಲಿ “ಕೈಪಿ” ಎಂಬ ರಾಸಾಯನಿಕ ಮಿಶ್ರಿತ ನೀರಿನ ಮುಖಾಂತರ ಚಿಕಿತ್ಸೆ ನೀಡಿದ ದಾಖಲೆಗಳು ಇದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಅಥವಾ ಶೀತ ಹವೆಯಲ್ಲಿ ರಕ್ತನಾಳಗಳು ಸಂಕುಚಿತಗೊಂಡು ಶ್ವಾಸಕೋಶ ಸಂಬಂಧಿ ಹೆಚ್ಚಿನ ರೋಗಗಳು ಉಲ್ಬಣಗೊಳ್ಳುವುದು ಸಹಜ. ಅಸ್ತಮಾ ರೋಗ ಕೂಡಾ ಇದಕ್ಕೆ ಹೊರತಾಗಿಲ್ಲ. ಸಂಪೂರ್ಣವಾದ ಪರಿಹಾರ ಈ ರೋಗಕ್ಕೆ ಇಲ್ಲದಿದ್ದರೂ ಸೂಕ್ತ ಔಷಧಿಗಳನ್ನು ಸರಿಯಾದ ಪ್ರಮಾಣದಲ್ಲಿ ತೆಗೆದುಕೊಂಡಲ್ಲಿ ಅಸ್ತಮಾ ರೋಗ ಉಲ್ಬಣವಾಗದಂತೆ ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಿದೆ. ಕಾಲಕಾಲಕ್ಕೆ ವೈದ್ಯರನ್ನು ಕಂಡು ರೋಗದ ಲಕ್ಷಣಗಳು ಮರುಕಳಿಸದಂತೆ ಎಚ್ಚರ ವಹಿಸಿದಲ್ಲಿ ಅಸ್ತಮಾ ರೋಗ ನಮ್ಮ ದೈನಂದಿನ ಚಟುವಟಿಕೆಗಳಿಗೆ ಯಾವುದೇ ತೊಡಕಾಗದಂತೆ ಮಾಡಬಹುದು. ಅಸ್ತಮಾ ರೋಗದ ಸೂಕ್ತ ನಿರ್ವಹಣೆಯಲ್ಲಿ ರೋಗದ ಚಿಕಿತ್ಸೆಗಿಂತ ರೋಗ ತಡೆಗಟ್ಟುವ ಪ್ರಕ್ರಿಯೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.

 

ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787

error: Content is protected !!
Scroll to Top