ಕುಕ್ಕೇ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠದ ನಡುವಿನ ವಿವಾದದ ಹಿನ್ನೆಲೆ ► ಚೈತ್ರಾ ಕುಂದಾಪುರ ಮತ್ತು ಹಿಂಜಾವೇ ಮುಖಂಡರ ಮಧ್ಯೆ ನಡು ರಸ್ತೆಯಲ್ಲೇ ಹೊಡೆದಾಟ ► ಹಿಂಜಾವೇ ಮುಖಂಡ ಗುರುಪ್ರಸಾದ್ ಪಂಜರವರಿಗೆ ಗಂಭೀರ ಹಲ್ಲೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.24. ಕಳೆದ ಕೆಲವು ದಿನಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸರ್ಪಸಂಸ್ಕಾರ ವಿಚಾರದಲ್ಲಿ ಚರ್ಚೆಯನ್ನು ಹುಟ್ಟು ಹಾಕಿದ್ದ ತನ್ನ ಹೇಳಿಕೆಯ ಬಗ್ಗೆ ಪ್ರಶ್ನಿಸಲು ಕುಕ್ಕೇ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಚೈತ್ರಾ ಕುಂದಾಪುರ ಮತ್ತು ಸಂಗಡಿಗರು ಹಾಗೂ ವಿರೋಧಿ ತಂಡದ ಮಧ್ಯೆ ಹೊಡೆದಾಟ ಉಂಟಾದ ಪರಿಣಾಮ ಹಿಂಜಾವೇ ಸುಳ್ಯ ತಾಲೂಕು ಕಾರ್ಯದರ್ಶಿ ಗುರುಪ್ರಸಾದ್ ಪಂಜರವರು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

 

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪಸಂಸ್ಕಾರದ ಬಗ್ಗೆ ಚೈತ್ರಾ ಕುಂದಾಪುರ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೆಯೊಂದನ್ನು ನೀಡಿದ್ದು, ಈ ಬಗ್ಗೆ ಚೈತ್ರಾ ಕುಂದಾಪುರ ಹಾಗೂ ಸುಬ್ರಹ್ಮಣ್ಯದ ಸ್ಥಳೀಯರ ನಡುವೆ ಫೇಸ್ ಬುಕ್ ನಲ್ಲಿ ಚರ್ಚೆ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚೈತ್ರಾ ಕುಂದಾಪುರ ತನ್ನ ಸಂಗಡಿಗರೊಂದಿಗೆ ಬುಧವಾರದಂದು ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು, ಇತ್ತಂಡಗಳ ನಡುವೆ ಮಾತುಕತೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಸಂದರ್ಭ ಚೈತ್ರಾ ಕುಂದಾಪುರ ಸಂಗಡಿಗರು ಹಿಂದೂ ಜಾಗರಣಾ ವೇದಿಕೆ ಮುಖಂಡ ಗುರುಪ್ರಸಾದ್ ಅವರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಗುರುಪ್ರಸಾದ್ ಅವರನ್ನು ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚೈತ್ರಾ ಮತ್ತು ಸಂಗಡಿಗರನ್ನು ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Also Read  ಕಡಬ ಸಿಇಒ ಅವರಿಂದ ಕೊಂಬಾರು ಬಸ್ ನಿಲ್ದಾಣದಲ್ಲಿರುವ ಪುಸ್ತಕದ ಗೂಡಿಗೆ ಚಾಲನೆ

error: Content is protected !!
Scroll to Top