(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.18. ಬೆಂಗಳೂರಿಗೆ ತಾಳೆ ಎಣ್ಣೆ ಸಾಗಿಸುತ್ತಿದ್ದ ಲಾರಿಯ ಚಾಲಕನನ್ನು ಅಪಹರಿಸಿ ಕೊಲೆಗೈದಿರುವ ಪ್ರಕರಣವನ್ನು ಭೇದಿಸಿರುವ ಮಂಗಳೂರು ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 28 ರಂದು ಬೈಕಂಪಾಡಿಯಲ್ಲಿರುವ ರುಚಿ ಸೋಯ ಇಂಡಸ್ಟ್ರೀಯಿಂದ ಸುಮಾರು 7 ಲಕ್ಷ 50 ಸಾವಿರ ರೂ. ಮೌಲ್ಯದ 1050 ಬಾಕ್ಸ್ ತಾಳೆ ಎಣ್ಣೆಯನ್ನು ಸುಗಮ ಕಂಪನಿಯ ಲಾರಿಯಲ್ಲಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದ್ದು, ತಲುಪಿಸಬೇಕಾದ ಸ್ಥಳಕ್ಕೆ ತಲುಪಿಸದೇ ಮೋಸ ಮಾಡಿರುವ ಬಗ್ಗೆ ಶಿವಗಣೇಶ್ ಟ್ರಾನ್ಸ್ ಪೋರ್ಟ್ ಮಾಲೀಕರು ಪಣಂಬೂರು ಠಾಣೆಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಬೆಚ್ಚಿ ಬಿದ್ದಿದ್ದು, ಲಾರಿ ಚಾಲಕ ಅನಿಲ್ ಕುಮಾರ್ ನನ್ನು ಕೊಲೆ ಗೈಯಲ್ಪಟ್ಟ ಮಾಹಿತಿ ಬಹಿರಂಗಗೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಬೆಂಗಳೂರಿನ ಕೆಂಗೇರಿ ಹೋಬಳಿಯ ಕಂಬಿಪುರ ನಿವಾಸಿ ರಹಮಾನ್ ಷರೀಫ್ ಎಂಬವರ ಪುತ್ರ ಅಸಾದುಲ್ಲಾ ಷರೀಪ್(50) ನನ್ನು ಬಂಧಿಸಿದ್ದಾರೆ.
ಆರೋಪಿಯು ತನ್ನ ಸಹಚರರೊಂದಿಗೆ ಸೇರಿಕೊಂಡು ಲಾರಿ ಚಾಲಕ ಅನಿಲ್ ನನ್ನು ಕೊಲೆ ಮಾಡಿ ಶವವನ್ನು ರಾಮನಗರ ಜಿಲ್ಲೆಯ ಕುಂಬಳಗೋಡು ಎಂಬಲ್ಲಿ ಹೂತು ಹಾಕಿ ಲಾರಿಯಲ್ಲಿದ್ದ ಮಾಲನ್ನು ದೋಚಿದ್ದಾನೆ. ಅನಿಲ್ ಕುಮಾರ್ ನ ಶವವನ್ನು ಬೆಂಗಳೂರು ದಕ್ಷಿಣ ಉಪ-ವಿಭಾಗಾಧಿಕಾರಿ ಮೂಲಕ ಮಣ್ಣಿನಿಂದ ಹೊರತೆಗೆದು ಶವ ಪರೀಕ್ಷೆ ನಡೆಸಿ ವಾರೀಸುದಾರರಿಗೆ ಹಸ್ತಾಂತರಿಸಲಾಗಿದ್ದು, ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಲಾಗಿದೆ.