(ನ್ಯೂಸ್ ಕಡಬ) newskadaba.com ರಿಯಾದ್, ಸೆ.06. ಇತ್ತೀಚೆಗೆ ರಿಯಾದ್ ನಲ್ಲಿ ಹೃದಯಾಘಾತದಿಂದ ನಿಧನರಾದ ವಿಟ್ಲ ಮೂಲದ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಇಲ್ಲಿನ ಎಕ್ಸಿಟ್ 15 ರ ಅಲ್ ರಾಜ್’ಹಿ ಮಸೀದಿಯ ಸಾರ್ವಜನಿಕ ದಫನ ಭೂಮಿಯಲ್ಲಿ ನೆರವೇರಿಸಲಾಯಿತು.
ಬಂಟ್ವಾಳ ತಾಲೂಕಿನ ಕಡಂಬು – ಅನಿಲಕಟ್ಟೆ ನಿವಾಸಿ ಮೋನು ಬ್ಯಾರಿಯ ಹಿರಿಯ ಪುತ್ರ ಮೆಹ್ಮೂದ್ (53) ಕಳೆದ ಇಪ್ಪತ್ತು ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ನೌಕರಿ ಮಾಡುತ್ತಿದ್ದು ಇತ್ತೀಚೆಗಷ್ಟೇ ಊರಿನಿಂದ ಮರಳಿದ್ದರು ಎನ್ನಲಾಗಿದೆ. ಇತ್ತೀಚೆಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದರು.
ಕರಾವಳಿ ಮೂಲದ ವ್ಯಕ್ತಿಯೊಬ್ಬರ ನಿಧನವಾಗಿದೆ ಎಂಬ ಸುದ್ದಿ ಸಿಕ್ಕಿದ ತಕ್ಷಣ ಆಸ್ಪತ್ರೆಗೆ ಧಾವಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಕಾರ್ಯಕರ್ತರು ಮೃತರ ಆಪ್ತರು ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಬಳಿಕ ಮೃತ ವ್ಯಕ್ತಿಯ ಮರಣೋತ್ತರ ಕ್ರಿಯೆಗೆ ಅಗತ್ಯ ಬರುವ, ವಿವಿಧ ಮೂಲಗಳಿಂದ ಸಂಗ್ರಹಿಸಬೇಕಾದ ದಾಖಲೆ ಪತ್ರಗಳನ್ನು ತ್ವರಿತ ಗತಿಯಲ್ಲಿ ಸರಿಪಡಿಸಿ, ಕುಟುಂಬದ ಅನುಮತಿ ಪಡೆದು ಇಲ್ಲೇ ದಫನ ಕಾರ್ಯದ ಏರ್ಪಾಡು ಮಾಡಲಾಯಿತು. ಸೌದಿ ಅರೇಬಿಯಾದ ವಲಸೆ ನೀತಿಯಡಿಯಲ್ಲಿ ಬರುವ ಕಾನೂನಿನಂತೆ ಇಲ್ಲಿ ಮೃತರಾಗುವ ವ್ಯಕ್ತಿಗಳ ಮೃತದೇಹವನ್ನು ವಾರಸುದಾರರಿಗೆ ಬಿಟ್ಟು ಕೊಡಬೇಕಾದರೆ ಅನೇಕ ಇಲಾಖೆಗಳಿಂದ ಕಡತಗಳನ್ನು ಸರಿಪಡಿಸಬೇಕಾದ ಅಗತ್ಯವಿತ್ತಲ್ಲದೆ ಊರಿನ ಕುಟುಂಬ ವರ್ಗದ ಅನುಮತಿ ಪತ್ರವನ್ನೂ ತರಿಸಬೇಕಿತ್ತು.
ಈ ಎಲ್ಲಾ ಕೆಲಸಗಳನ್ನು ಎರಡೇ ದಿನಗಳಲ್ಲಿ ಮಾಡಿ ಮುಗಿಸಿದ ಕೆಸಿಎಫ್ ರಿಯಾದ್ ಝೋನ್ ಮುಖಂಡ ಮಜೀದ್ ವಿಟ್ಲ ರವರಿಗೆ ಮೃತರ ಕುಟುಂಬವು ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದೆ. ಇಲ್ಲಿನ ಎಕ್ಸಿಟ್ 15 ರ ಅಲ್ ರಾಜ್’ಹಿ ಮಸೀದಿಯಲ್ಲಿ ನಡೆದ ಜನಾಝ ನಮಾಝ್ ಹಾಗೂ ಅಂತ್ಯ ಕ್ರಿಯೆಯಲ್ಲಿ ಮೃತರ ಸಹೋದರ ಹಮೀದ್, ಮೃತರ ಆಪ್ತರು, ಇತರ ಕುಟುಂಬ ಮಿತ್ರಾದಿಗಳು, ಸ್ಥಳೀಯ ನಿವಾಸಿಗಳು, ಕೆಸಿಎಫ್ ಕಾರ್ಯಕರ್ತರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.