(ನ್ಯೂಸ್ ಕಡಬ) newskadaba.com ಕಡಬ, ಸೆ.02. ಕಡಬ ಪ್ರಖಂಡ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಆಶ್ರಯದಲ್ಲಿ ವಿಶ್ವಹಿಂದು ಪರಿಷತ್‍ನ ಸ್ಥಾಪನಾ ದಿನಾಚರಣೆ ಅಂಗವಾಗಿ ಅದ್ದೂರಿ ಮೊಸರು ಕುಡಿಕೆ ಉತ್ಸವ, ಬೃಹತ್ ಶೋಭಾಯಾತ್ರೆ ಮತ್ತು ಧಾರ್ಮಿಕ ಸಭೆ ಸೆ.9 ನೇ ಭಾನುವಾರ ಕಡಬ ಶ್ರೀದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡ ಗೌರವಾಧ್ಯಕ್ಷ ಜನಾರ್ಧನ ರಾವ್ ಹೇಳಿದರು.
ಅವರು ಮಂಗಳವಾರ ಕಡಬ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಟಿ ನಡೆಸಿ ಈ ವಿಚಾರ ತಿಳಿಸಿದರು. ಇಡೀ ಜಗತ್ತಿಗೆ ಉದಾತ್ತ ಸಂದೇಶವನ್ನು ನೀಡಿದ ಹಿಂದೂ ಧರ್ಮದ ಸಾಂಸ್ಕತಿಕ ಪರಂಪರೆ ದೇಶದಲ್ಲಿ ಅದಪತನಕ್ಕೆ ಇಳಿದ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ 1964ರಲ್ಲಿ ವಿಶ್ವ ಹಿಂದು ಪರಿಷತ್‍ನ್ನು ಒಟ್ಟು ಹಾಕಿ ಆ ಮೂಲಕ ಸಂಸ್ಕತಿಯ ಪುನರುತ್ಥಾನ ಮಾಡಲು ಸಂಕಲ್ಪವನ್ನು ಮಾಡಿತು. ಅಂದಿನಿಂದ ಇಂದಿನ ತನಕ ದೇಶಾದ್ಯಂತ ನಿರಂತರ ಧಾರ್ಮಿಕ ಚಿಂತನೆಗಳನ್ನೊಳಗೊಂಡ ಸಂಸ್ಕತಿಯ ಉಳಿವಿಗಾಗಿ ಹತ್ತು ಹಲವು ಕಾರ್ಯಕ್ರಮಗಳನ್ನು ನೆಸುತ್ತಾ ಬಂದಿರುವ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳ ಇದೀಗ ವಿಶ್ವ ಹಿಂದೂ ಪರಿಷತ್ ಸ್ಥಾಪಕ ದಿನದ ಅಂಗವಾಗಿ ಮೊಸರು ಕುಡಿಕೆ ಉತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ಉತ್ಸವದ ಅಂಗವಾಗಿ ವಿಶ್ವ ಹಿಂದು ಪರಿಷತ್ ಮುಖಂಡ ದಿ| ರಾಧಾಕೃಷ್ಣ ಭಟ್ ಕೋಡಿಬೈಲ್ ಅವರ ಸ್ಮರಣಾರ್ಥ ಮುಕ್ತ ಹಗ್ಗಜಗ್ಗಾಟವನ್ನು ನಡೆಸಲಾಗುವುದು. ಬೆಳಿಗ್ಗೆ ನಡೆಯುವ ಈ ರೋಮಾಂಚನಕಾರಿ ಪಂದ್ಯವನ್ನು ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಕಡಬ ಸಂತೆಕಟ್ಟೆ ಬಳಿಯಿಂದ ಭಾಗೀರಥಿ ಟವರ್ಸ್‍ವರೆಗೆ ಮುಖ್ಯರಸ್ತೆ ಉದ್ದಕ್ಕೂ ಹಿಂದು ವೀರ ಯುವಕರಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸಮಯ ಪ್ರದರ್ಶನದೊಂದಿಗೆ ನಡೆಯುವ ಭವ್ಯ ಶೋಭಾಯಾತ್ರೆಯನ್ನು ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಉದ್ಘಾಟಿಸಲಿದ್ದಾರೆ. ಬಳಿಕ ಭಾಗೀರಥಿ ಟವರ್ಸ್ ಎದುರುಗಡೆ ನಡೆಯುವ ಧಾರ್ಮಿಕ ಸಭೆಯಲ್ಲಿ ನಡುಮಜಲು ಶ್ರೀಮಹಾವಿಷ್ಣು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸತ್ಯನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ ಜಿಲ್ಲಾ ಅಖಿಲ ಭಾರತ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಅಕ್ಷತಾ ಬಜಪೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್, ಭಜರಂಗದಳ ಪ್ರಾಂತ ಸಹಸಂಚಾಲಕ ಮುರಳೀಕೃಷ್ಣ ಹಸಂತಡ್ಕ, ಕಡಬ ಪ್ರಖಂಡ ವಿಶ್ವಹಿಂದು ಪರಿಷತ್ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಮಹಿಳಾ ಪ್ರಮುಖ್ ಪ್ರೀತ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಚೆಂಡೆ ಕುಣಿತ ನಡೆಯಲಿದೆ ಎಂದು ವಿವರಿಸಿದ ಜನಾರ್ಧನ್ ರಾವ್ ಭಾಗವಹಿಸಿದ ಎಲ್ಲಾ ತಂಡಗಳಿಗೆ ಸ್ಮರಣಿಕೆ ನೀಡಲಾಗುವುದು, ಅಟ್ಟಿ ಮಡಿಕೆ ಪ್ರದರ್ಶನ ಮಧ್ಯಾಹ್ನ 2 ಗಂಟೆಗೆ ಪ್ರಾರಂಭಿಸಲಾಗುವುದು, ಈ ಸಾಹಸ ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಚಿಸುವ ತಂಡಗಳು ಒಂದು ದಿನ ಮುಂಚಿತವಾಗಿ ಸಂಘಟಕರಲ್ಲಿ ನೋಂದಾಯಿಸಿಕೊಳ್ಳಬೇಕು. ಮುಖ್ಯವಾಗಿ ಎಲ್ಲಾ ಸ್ಪರ್ಧೆಗಳು ಹಿಂದೂ ಬಾಂಧವರಿಗೆ ಮಾತ್ರ ಎಂದು ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ವಿಶ್ವ ಹಿಂದು ಪರಿಷತ್ ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಭಜರಂಗದಳ ಕಡಬ ಪ್ರಖಂಡದ ಮಾಜಿ ಸಂಚಾಲಕ ಸಂತೋಷ್ ಕುಮಾರ್ ಕೋಡಿಬೈಲ್, ಮುಖಂಡರಾದ ಸುರೇಶ್ ಕಡಬ, ರಘುರಾಮ ನಾೈಕ್ ಕೊಠಾರಿ ಮೊದಲಾದವರು ಉಪಸ್ಥಿತರಿದ್ದರು.