(ನ್ಯೂಸ್ ಕಡಬ) newskadaba.com ಸೌದಿ ಅರೇಬಿಯಾ, ಸೆ.01. ಸೌದಿ ಅರೇಬಿಯಾದ ಕಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಚಿವಾಯಲವು ಮತ್ತೆ 12 ವಲಯದ ಉದ್ಯೋಗಗಳನ್ನು ಸೌದೀಕರಣಗೊಳಿಸಿದ್ದು, ಸೆಪ್ಟೆಂಬರ್ 11 ರ ನಂತರ ಲಕ್ಷಾಂತರ ವಿದೇಶಿಯರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮೊದಲ ಹಂತದ ಸೌದೀಕರಣ ಪ್ರಾರಂಭಗೊಳ್ಳಲಿದ್ದು, ವಾಹನ ಶೋರೂಂ ಹಾಗೂ ಆಟೋಮೊಬೈಲ್, ಮಕ್ಕಳ ಹಾಗೂ ಗಂಡಸರ ಸಿದ್ಧ ಉಡುಪುಗಳ ಮಳಿಗೆಗಳು, ಪೀಠೋಪಕರಣ ಮಳಿಗೆಗಳು ಹಾಗೂ ಮನೆ ಬಳಕೆಯ ವಸ್ತುಗಳ ಮಾರಾಟ ಮಳಿಗೆಗಳು ಪ್ರಥಮ ಹಂತದಲ್ಲಿ ಸೌದೀಕರಣಕ್ಕೆ ಒಳಪಡಲಿದೆ. ದ್ವಿತೀಯ ಹಂತದಲ್ಲಿ ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ಸ್, ವಾಚ್ ಅಂಗಡಿಗಳು, ಅಪ್ಟಿಕಲ್ಸ್ ಹಾಗೂ ಮೆಡಿಕಲ್ ಶೋಪ್ ಗಳು ತೃತೀಯ ಹಂತದಲ್ಲಿ ಕಟ್ಟಡ ಕಾಮಗಾರಿಯ ವಸ್ತುಗಳನ್ನು ಮಾರಾಟಮಾಡುವ ಮಳಿಗೆಗಳು, ವಾಹನದ ಬಿಡಿ ಭಾಗಗಳನ್ನು ಮಾರಾಟ ಮಾಡುವ ಮಳಿಗೆಗಳು, ಕಾರ್ಪೆಟ್ ಮಾರಾಟ ಮಾಡುವ ಮಳಿಗೆಗಳು ಹಾಗೂ ಚಾಕಲೇಟ್ ಹಾಗೂ ಸಿಹಿತಿಂಡಿ ಮಾರಾಟ ಮಾಡುವ ಅಂಗಡಿಗಳೂ 2019ನೇ ಜನವರಿಯಿಂದ ಸೌದೀಕರಣಗೊಳ್ಳಲಿದೆ.
ಈ ಸೌದೀಕರಣವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಲುವಾಗಿ ಹಲವಾರು ಸೌದಿ ಯುವಕರಿಗೆ ತರಬೇತಿ ನೀಡಲಾಗುತ್ತಿದ್ದು, ಮೇಲಿನ ಎಲ್ಲಾ ಉದ್ಯೋಗ ವಲಯಗಳಲ್ಲೂ ಸೆಪ್ಟೆಂಬರ್ 11 ರಿಂದ ಕಟ್ಟುನಿಟ್ಟಿನ ಪರಿಶೀಲನೆ ನಡೆಯಲಿದೆ ಹಾಗೂ ಕಾನೂನು ಉಲ್ಲಂಘಿಸಿದವರಿಗೆ ಭಾರೀ ದಂಡದೊಂದಿಗೆ ಗಡಿಪಾರು ಶಿಕ್ಷೆಯನ್ನು ನೀಡಲಾಗುವುದೆಂದು ಸೌದಿ ಕಾರ್ಮಿಕ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿಂದೆ ಕೆಲವು ಕ್ಷೇತ್ರಗಳನ್ನು ಸೌದೀಕರಣ ಮಾಡಿದ್ದರಿಂದ ಲಕ್ಷಾಂತರ ಮಂದಿ ಕೆಲಸವಿಲ್ಲದೆ ಭಾರತಕ್ಕೆ ಆಗಮಿಸಿದ್ದರು. ಇದೀಗ ಮತ್ತೊಮ್ಮೆ ಸೌದೀಕರಣದ ನೆಪದಲ್ಲಿ ಸಾವಿರಾರು ಮಂದಿಯ ಉದ್ಯೋಗಕ್ಕೆ ಕತ್ತರಿ ಬೀಳಲಿದ್ದು, ಸ್ವದೇಶಕ್ಕೆ ಆಗಮಿಸಬೇಕಿದೆ.