(ನ್ಯೂಸ್ ಕಡಬ) newskadaba.com ಕಡಬ, ಆ.12. ಮೊಬೈಲ್ ಮೆಸೇಜ್ ನಂಬಿ ಕಾರು ಸಿಗುತ್ತದೆ ಎಂದು ಹಣ ತೆತ್ತು ಮೋಸ ಹೋದ ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಿ, ಪ್ರಧಾನಿ ಕಾರ್ಯಾಲಯದಿಂದ ಕಡಬ ಠಾಣೆಗೆ ಸೂಚನೆ ಬಂದ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿದ ಘಟನೆ ಶನಿವಾರದಂದು ನಡೆದಿದೆ.
ಕಡಬ ಸಮೀಪದ ಕೋಡಿಂಬಾಳ ನಿವಾಸಿ ನಾಗರತ್ನ ಸುಮಾರು 25900 ಕಳಕೊಂಡು ಮೋಸ ಹೋಗಿರುವ ಅರಿವಾದ ಬಳಿಕ ಪ್ರಧಾನಮಂತ್ರಿಯವರಿಗೆ ದೂರು ನೀಡಿದ್ದಾರೆ. ಕಳೆದ ಎಪ್ರಿಲ್ ತಿಂಗಳಲ್ಲಿ ಆದ ಮೋಸಕ್ಕೆ ಇತ್ತೀಚೆಗೆ ಎರಡು ದಿನಗಳ ಹಿಂದೆ ಪ್ರಧಾನಿಗೆ ಪತ್ರ ಬರೆದ ಪರಿಣಾಮ ಶನಿವಾರ ಪೊಲೀಸರಿಗೆ ತನಿಖೆ ನಡೆಸುವ ಆದೇಶ ಬಂದಿದೆ. ಇದ್ದಕ್ಕಿದ್ದಂತೆ ಒಂದು ದಿನ ನಾಗರತ್ನ ಅವರ ಮೊಬೈಲ್‍ಗೆ ಒಂದು ಮೆಸೇಜ್ ಬಂದು ಅದರಲ್ಲಿ ನಿಮ್ಮ ಮೊಬೈಲ್ ನಂಬರ್‍ಗೆ ಲಕ್ಕಿ ಡ್ರಾ ಬಂದಿದ್ದು, ಸಫಾರಿ ಕಾರು ನಿಮ್ಮದಾಗಿದೆ, ಇದನ್ನು ಪಡೆಯಲು ನೀವು 6600 ಪಾವತಿಸಿ ಎಂದು ತಿಳಿಸಲಾಗಿತ್ತು. ಜಾರ್ಖಂಡ್‍ನ ಬ್ಯಾಂಕ್‍ನ ಖಾತೆಗೆಗೆ ಹಣ ಜಮಾವಣೆ ಮಾಡುವಂತೆ ಕೇಳಿಕೊಳ್ಳಲಾಗಿತ್ತು. ಈ ವಿಚಾರವನ್ನು ಯಾರಿಗೂ ಹೇಳದೆ ಮುಚ್ಚಿಟ್ಟ ಮಹಿಳೆ ತನ್ನ ಪತಿಯವರಿಗೂ ತಿಳಿಸದೆ ಹಣ ಜಮಾವಣೆ ಮಾಡಿದ್ದಾರೆ, ಸ್ವಲ್ಪ ದಿನದ ಬಳಿಕ ಮತ್ತೊಂದು ಮೆಸೇಜ್ ಬಂದಿತು, ಅದರಲ್ಲಿ ನಮ್ಮ ಕಾರಿನ ಬೆಲೆ 12 ಲಕ್ಷ ರೂ. ನಾವು ಕಾರಿನ ಬದಲು 12 ಲಕ್ಷ ರೂವನ್ನು ನಿಮ್ಮ ಖಾತೆಗೆ ಜಮಾವಣೆ ಮಾಡುತ್ತೇವೆ, ಆದರೆ ಅದಕ್ಕೆ 12,000 ರೂವನ್ನು ನಮ್ಮ ಖಾತೆಗೆ ಜಮಾವಣೆ ಮಾಡಿ ಎಂದು ಹೇಳಿತ್ತು.
ಹೇಗೂ 12 ಲಕ್ಷ ರೂ. ಬರುತ್ತದಲ್ಲಾ ಎಂದುಕೊಂಡು 12 ಸಾವಿರ ಕಟ್ಟಿ ಬಿಡೋಣ ಎಂದು ಪಾವತಿ ಮಾಡಿಯೇ ಬಿಟ್ಟರು ಈ ಕಡೆಯಿಂದ. ಅದಕ್ಕೆ ಮತ್ತೊಂದು ಮೆಸೇಜ್ ಬಂತು 12 ಲಕ್ಷವನ್ನು ಕಳುಹಿಸಲು 6000 ರೂ ಫೀಜ್ ಕಟ್ಟಿ ಎಂದು ಹೇಳಲಾಗಿತ್ತು. ಅದಕ್ಕೂ ಸೈ ಎಂದ ಮಹಿಳೆ ಅಷ್ಟು ದುಡ್ಡನ್ನು ಪಾವತಿಸಿಯೇ ಬಿಟ್ಟರು. ಅಷ್ಟರಲ್ಲಿ ಅಷ್ಟು ಇಷ್ಟು ಎಂದು 23,900 ರೂ ಪಾವತಿಸಿಯಾಗಿತ್ತು. ಹನ್ನೆರಡು ಲಕ್ಷ ದಾಸೆಯಲ್ಲಿ ಈ ವಿಚಾರವನ್ನು ಮುಚ್ಚಿಟ್ಟು ವ್ಯವಹಾರ ನಡೆಸುತ್ತಿದ್ದ ಮಹಿಳೆಗೆ ಕೊನೆಗೆ ತಾನು ಮೋಸ ಹೋಗುತ್ತಿರುವುದು ಅರಿವಿಗೆ ಬಂತು. ಮತ್ತೆ ಮೆಸೇಜ್‍ಗೆ ಉತ್ತರಿಸುವ ಧೈರ್ಯ ತೋರದ ಮಹಿಳೆ ಸುಮ್ಮನಾದರು. ಇಷ್ಟೆಲ್ಲಾ ಆಗಿದ್ದು ಕಳೆದ ಎಪ್ರಿಲ್ ತಿಂಗಳಲ್ಲಿ. ಇಷ್ಟು ಸುಧೀರ್ಘ ದಿನಗಳ ಬಳಿಕ ಕಳೆದ ಎರಡು ದಿನಗಳ ಹಿಂದೆ ಪ್ರಧಾನಿಯವರಿಗೆ ದೂರು ನೀಡಿದ್ದರು. ಪ್ರಧಾನಿ ಕಾರ್ಯಾಲಯದಿಂದ ಕಡಬ ಠಾಣೆಗೆ ಪತ್ರ ಬಂದಿದೆ. ಈ ಹಿನ್ನೆಯಲ್ಲಿ ಕಡಬ ಠಾಣೆಯಲ್ಲಿ ಮೋಸ ಪ್ರಕರಣ ದಾಖಲಿಸಿಲಾಗಿದೆ. ಜಾರ್ಖಂಡ್‍ನ ಬ್ಯಾಂಕೊಂದರ ಖಾತೆಗೆ ಜಮಾ ಮಾಡಿರುವುದು ಕಂಡು ಬಂದಿದ್ದು, ಖಾತೆದಾರರ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಂದು ಕಡಬ ಎಸ್.ಐ ಪ್ರಕಾಶ್ ದೇವಾಡಿಗ ತಿಳಿಸಿದ್ದಾರೆ.