ನಾಟಿಕೋಳಿಗಳನ್ನು ಬಾಧಿಸುವ ಗ್ರಾಣಿಕೆಟ್ ವೈರಸ್‌ನ ಕೊಕ್ಕರೆ ರೋಗ ► ಆತಂಕದಲ್ಲಿ ಕೋಳಿ ಸಾಕಾಣಿಕೆದಾರರು – ರೋಗಕ್ಕಿರುವ ಪರಿಹಾರವೇನು..?

(ನ್ಯೂಸ್ ಕಡಬ) newskadaba.com ಆಲಂಕಾರು, ಆ.05. ರೊಟ್ಟಿ ಮತ್ತು ನಾಟಿ ಕೋಳಿ ಸಾರು ಆಹಾರ ತಿಂದವನು ಮಾತ್ರ ಬಲ್ಲ ಇದರ ರುಚಿಯ. ಕರಾವಳಿಯ ಅತ್ಯಂತ ಜನಪ್ರಿಯ ಆಹಾರವಾದ ನಾಟಿ ಕೋಳಿಗಳ ವಂಶಕ್ಕೆ ಗ್ರಾಣಿಕೆಟ್ ಎಂಬ ವೈರಸ್ನಿಂದ ಕೊಕ್ಕರೆ ರೋಗ ದಾಳಿಯಾಗಿದ್ದು ಇಡೀ ನಾಟಿ ಕೋಳಿ ವಂಶವೇ ವಿನಾಶದ ಅಂಚಿನಲ್ಲಿದೆ.

ಇದರಿಂದ ಮನುಷ್ಯರಿಗೆ ಯಾವುದೇ ತೊಂದರೆ ಇಲ್ಲದಿದ್ದರೂ ಕೋಳಿ ಸಾಕಾಣೆದಾರರಲ್ಲಿ ಆತಂಕ ಸೃಷ್ಠಿಸಿದೆ. ನಾಲ್ಕು ವರ್ಷಗಳಿಂದ ಇಲ್ಲದ ಈ ರೋಗ ಮಳೆಗಾಲದ ಅಂತ್ಯಕ್ಕೆ ಹೆಚ್ಚಾಗಿ ದಾಳಿಯಾಗುತ್ತಿತ್ತು. ಆದರೆ ಈ ವರ್ಷ ಮಳೆಗಾಲದ ಆರಂಭದಲ್ಲೇ ರೋಗ ಕಾಣಿಸಿಕೊಂಡಿದೆ. ಕೋಳಿಗಳಿಗೆ ಕೊಕ್ಕರೆ ರೋಗವು ಕೊಕ್ಕರೆಗಳಿಂದಲೇ ಬರುತ್ತವೆ. ಕೊಕ್ಕರೆಗಳು ಬಯಲು ಪ್ರದೇಶಗಳಿಗೆ ನವಂಬರ್ ಮತ್ತು ಮೇ ತಿಂಗಳಲ್ಲಿ ಹೆಚ್ಚಾಗಿ ವಲಸೆ ಬರುವ ಕಾರಣ ರೋಗವು ಈ ಸಮಯದಲ್ಲೇ ಹೆಚ್ಚಾಗಿರುತ್ತದೆ. ರೋಗಕ್ಕೆ ತುತ್ತಾದ ಕೋಳಿಯ ಒಂದು ಚಿಕ್ಕ ಗರಿಯಿಂದಲೂ ವೈರಸ್ ಹರಡುವುದರಿಂದ ಸತ್ತ ಕೋಳಿಯನ್ನು ಸಮರ್ಪಕವಾಗಿ ಸಂಸ್ಕಾರ ಮಾಡ ಬೇಕಾಗುತ್ತದೆ. ಇಲ್ಲವಾದರೆ ಗಾಳಿಯಿಂದ ಹರಿಯುವ ನೀರಿನಿಂದ ರೋಗ ಹರಡ ಬಹುದಾಗಿದೆ.

ಈ ರೋಗದ ವೈರಸ್ ಸಾಮಾನ್ಯ ಬಿಸಿಗೆ ಸಾಯದಿರುವುದರಿಂದ ಆಳವಾದ ಗುಂಡಿಯಲ್ಲಿ ಸತ್ತ ಕೋಳಿಗಳನ್ನು ಹಾಕುವುದರ ಮೂಲಕ ರೋಗವನ್ನು ತಡೆಗಟ್ಟ ಬಹುದು. ಕೊಕ್ಕರೆ ರೋಗಕ್ಕೆ ತುತ್ತಾದ ಕೋಳಿಯು ಕೊಕ್ಕರೆಯ ರೀತಿ ಕೂಗಾಡುತ್ತದೆ. ತಕ್ಷಣದಿಂದ ಆಹಾರ ಸೇವನೆಯನ್ನು ನಿಲ್ಲಿಸಿ ಹೆಚ್ಚಾಗಿ ನೀರನ್ನೇ ಸೇವಿಸುತ್ತದೆ. ತಕ್ಷಣದಿಂದ ತೂಕ ಕಡಿಮೆಯಾಗಿ ನಿತ್ರಾಣಕ್ಕೊಳಗಾಗುತ್ತದೆ. ಅಲ್ಲದೆ ಬಿಳಿ ಬಿಳಿಯಾಗಿ ಮಲ ವಿಸರ್ಜಿಸುತ್ತದೆ. ನಿತ್ರಾಣಕ್ಕೊಳಗಾದ ಕೋಳಿಯು ನಡೆಯಲಾಗದೆ ರೆಕ್ಕೆ ಮತ್ತು ಕಾಲುಗಳನ್ನು ಅಗಲಿಸಿ ಕುಳಿತುಕೊಳ್ಳುತ್ತದೆ. ಬಳಿಕ ಕೊಕ್ಕರೆಯಂತೆ ಮುದುಡಿಕೊಳ್ಳುತ್ತದೆ. ಕೆಲವೊಮ್ಮೆ ಕೋಳಿಗಳ ತಲೆಯಲ್ಲಿ ಕಜ್ಜಿಯಾಗಿ ಬಾಯಲ್ಲಿ ರಕ್ತ ಬರುವ ಸಾಧ್ಯತೆಗಳು ಹೆಚ್ಚಾಗಿವೆ. ರೋಗಕ್ಕೆ ತುತ್ತಾದ ಕೋಳಿಯು ಒಂದೇ ವಾರದಲ್ಲಿ ಸಾವನ್ನಪ್ಪುತ್ತವೆ.

Also Read  ➤➤ ವಿಶೇಷ ಲೇಖನ ಮತ್ತೆ ಮರುಕಳಿಸುತ್ತಿರುವ ಝಿಕಾ ಜ್ವರ ✍️ ಮುರಲೀ ಮೋಹನ ಚೂಂತಾರು

ಈ ರೋಗ ಒಂದು ಪ್ರದೇಶದಲ್ಲಿ ಕಾಣಿಸಿಕೊಂಡರೆ ಆ ವ್ಯಾಪ್ತಿಯ ಎಲ್ಲಾ ಕೋಳಿಗಳನ್ನು ನಾಶ ಮಾಡಿ ಬಿಡುತ್ತದೆ. ರೋಗ ಬಾರದಂತೆ ಮುಂಜಾಗ್ರತೆ ವಹಿಸಿಕೊಳ್ಳುವುದು ಉತ್ತಮ. ಪ್ರತೀ ಆರು ತಿಂಗಳಿಗೊಮ್ಮೆ ಕೋಳಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದನ್ನು ನೀಡುವುದರಿಂದ ರೋಗ ಬಾರದಂತೆ ತಡೆಗಟ್ಟ ಬಹುದು. ಒಂದು ಕೋಳಿಯಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಆ ಕೋಳಿಯನ್ನು ಪ್ರತ್ಯೇಕಿಸಿ ಉಳಿದ ಕೋಳಿಗಳಿಗೆ ರೋಗ ನಿರೋಧಕ ಚುಚ್ಚು ಮದ್ದು ನೀಡಬೇಕು. ಒಮ್ಮೆ ರೋಗಕ್ಕೆ ತುತ್ತಾದ ಕೋಳಿಗೆ ಯಾವುದೇ ಔಷಧಿ ಫಲಿಸುವುದಿಲ್ಲ. ಉತ್ತಮ ಜಾತಿಯ, ಸೇಲಂ, ಈರೋಡ್ ಅಥವಾ ಅಂಕದ ಕೋಳಿಗಳ ಸಾಕಾಣೆದಾರರು ಪ್ರತೀ ಆರು ತಿಂಗಳಿಗೊಮ್ಮೆಯಾದರೂ ರೋಗ ನಿರೋಧಕ ಚುಚ್ಚು ಮದ್ದು ನೀಡುತ್ತಾ ಬಂದಲ್ಲಿ ಎಲ್ಲಾ ರೋಗ ರುಜಿನಗಳನ್ನು ತಡೆಗಟ್ಟ ಬಹುದು.

Also Read  ವಿಶ್ವ ಬಾಯಿ ಸ್ವಚ್ಛತಾ ದಿನ – ಆಗಸ್ಟ್ 1 ► ಡಾ|| ಮುರಲೀ ಮೋಹನ್ ಚೂಂತಾರುರವರ ವಿಶೇಷ ಲೇಖನ

ಮಳೆಗಾಲದಲ್ಲಿ ಕೊಕ್ಕರೆ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ರೋಗ ಕಾಣಿಸಿಕೊಂಡ ಬಳಿಕ ಯಾವ ಔಷಧಿಯೂ ಫಲಪ್ರದವಲ್ಲ. ಕೋಳಿಗಳಿಗೆ ಆರು ತಿಂಗಳೊಗೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡುವುದರಿಂದ ಶಾಶ್ವತವಾಗಿ ರೋಗ ಬಾರದಂತೆ ಕ್ರಮ ಕೈಗೊಳ್ಳಬಹುದು. ಪ್ರತೀ ಶನಿವಾರ ಕಡಬ ಪಶು ಆಸ್ಪತ್ರೆಯಲ್ಲಿ ಉಚಿತ ಚುಚ್ಚು ಮದ್ದು ನೀಡಲಾಗುವುದು. ಅಲ್ಲದೆ ರೋಗ ಭಾದಿತ ಮನೆಗಳಿಗೆ ತೆರಳಿ ಉಚಿತ ವೈದ್ಯಕೀಯ ಸೇವೆ ನೀಡಲಾಗುವುದು ಎಂದು ಕಡಬ ಪಶು ವೈದ್ಯಕೀಯ ವೈದ್ಯಾಧಿಕಾರಿ ಡಾ.ಧರ್ಮಪಾಲ್ ತಿಳಿಸಿದ್ದಾರೆ.

✍? ಸದಾನಂದ ಆಲಂಕಾರು

error: Content is protected !!
Scroll to Top