ಮುಖ ಪುಸ್ತಕ ವ್ಯಾಧಿ ಏನಿದು ಫೇಸ್ ಬುಕ್?

(ನ್ಯೂಸ್ ಕಡಬ) newskadaba.com ಕಡಬ,ಜು.14. ಫೇಸ್ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ. ಅಮೇರಿಕಾದ ಮೆಸ್ಸಾಚುಸೆಟ್ಸ್ನ ಕೇಂಬ್ರಿಡ್ಜ್ ಎಂಬಲ್ಲಿ 2004ರ ಫೆಬ್ರವರಿ 4ರಂದು ಅಧಿಕೃತವಾಗಿ ಉಗಮಗೊಂಡಿತ್ತು, ಮಾರ್ಕ್ ಜ್ಯುಕರ್ಬಗರ್ ಹಾವರ್ಡ್ ವಿಶ್ವವಿದ್ಯಾಲಯದ ವಿಧ್ಯಾರ್ಥಿ ಯಾಗಿದ್ದಾಗ ತಮ್ಮ ಕಾಲೇಜಿನ ಜತೆ ವಾಸಿಗರು ಮತ್ತು ಕಂಪ್ಯೂಟರ್ ಸೈನ್ಸ್ನ ವಿಧ್ಯಾರ್ಥಿ ಮಿತ್ರರಾದ ಎಡ್ವಾರ್ಡೊ ಸೆವರಿನ್, ಡಸ್ಕಿನ್ ಮಾಸ್ಕೊ ವಿಟ್ಸ್ ಮತ್ತು ಕ್ರಿಸ್ ಹ್ಯುಸ್ರೊಂದಿಗೆ ಸೇರಿ ಫೇಸ್ಬುಕ್ ಶೋಧಿಸಿದರು. ಆರಂಭದಲ್ಲಿ ಈ ಜಾಲತಾಣದ ಸದಸ್ಯತ್ವ ಕೇವಲ ಹಾವರ್ಡ್ ವಿಶ್ವವಿದ್ಯಾಲಯದ ವಿಧ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿತ್ತು. ನಂತರ ಸ್ಟಾನ್ಪೋಡ್ನ ವಿಶ್ವವಿದ್ಯಾಲಯ, ಬೊಸ್ಟನ್ ವಿಶ್ವವಿದ್ಯಾನಿಯಕ್ಕೆ ಹರಡಿತು. ನಂತರ ಇನ್ನೂ ವಿಸ್ತರಿಸುತ್ತಾ ಯಾವುದೇ ವಿಶ್ವವಿದ್ಯಾನಿಲಯಗಳ ವಿಧ್ಯಾರ್ಥಿಗಳಿಗೆ ಸೇರ್ಪಡೆಗೆ ಅವಕಾಶ ನೀಡತೊಡಗಿತು. ನಂತರ ಪ್ರೌಡಶಾಲೆಯ ವಿದ್ಯಾರ್ಥಿಗಳು ಮತ್ತು ಕೊನೆಯದಾಗಿ 13ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟು ಯಾರಾದರ ಸೇರಬಹುದಾಗಿದೆ. ಈ ಜಾಲತಾಣ ಇಂದು ವಿಶ್ವದಾದ್ಯಂತ 500 ಮಿಲಿಯನ್ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನುಹೊಂದಿದೆ. ಖಾಸಗಿ ಮಾಲಕತ್ವದ ಈ ಸಂಸ್ಥೆ ವಾರ್ಷಿಕವಾಗಿ 500 ಮಿಲಿಯನ್ ಆಮೇರಿಕನ್ ಡಾಲರ್ ಆದಾಯ ಹೊಂದಿದೆ. ಕ್ಯಾಲಿಫೋರ್ನಿಯ ಮತ್ತು ಡಬ್ಲಿನ್ಗಳಲ್ಲಿ ಕೇಂದ್ರ ಕಚೇರಿ ಹೊಂದಿದೆ. (ಯೂರೋಪ್ ಮತ್ತು ಆಫ್ರಿಕಾ ಖಂಡಗಳಿಗೆ) ಹಾಗೂ ದಕ್ಷಿಣ ಕೊರಿಯದ ಸಿಯೋಲ್ನಲ್ಲಿ (ಏಷ್ಯಾ ಖಂಡದ ಚಟುವಟಿಕೆಗಳಿಗೆ) ಕೇಂದ್ರ ಕಛೇರಿ ಹೊಂದಿದೆ. ವಿಶ್ವವಿದ್ಯಾಲಯದ ನಿರ್ವಾಹಕರು ತಮ್ಮ ವಿಧ್ಯಾರ್ಥಿಗಳು ಪರಸ್ಪರ ಒಳ್ಳೆಯ ರೀತಿಯಲ್ಲಿ ಪರಿಚಿತರಾಗಲಿ ಎಂಬ ಉದ್ದೇಶದಿಂದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಕೊಡುತ್ತಿದ್ದ ಆಡುಮಾತಿನ ಹೆಸರಿನಿಂದ, ಈ ವೆಬ್ಸೈಟ್ನ ಹೆಸರು ‘ಫೇಸ್ಬುಕ್’ ಎಂಬುದಾಗಿ ಉಗಮಗೊಂಡಿದೆ.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ತಂತ್ರಜ್ಞಾನ, ವೈಜ್ಞಾನಿಕತೆ ಆಧುನಿಕತೆ ಬೆಳೆದಂತೆ ಜನರ ಬೇಕು ಬೇಡಗಳು ಮತ್ತು ಅಗತ್ಯತೆಗಳು ಹೆಚ್ಚುತ್ತಲೇ ಇದೆ. ಜಗತ್ತು ದಿನದಿನಕ್ಕೆ ಕಿರಿದಾಗುತ್ತದೆ. ಎಲ್ಲೋ ನಡೆದ ಒಂದು ಘಟನೆ ಕ್ಷಣಾರ್ಧದಲ್ಲಿ ಎಲ್ಲೆಲ್ಲೊ ತಲುಪಿ ಬಿಡುತ್ತದೆ. ಎಲ್ಲೆಡೆ ದೊರಕುವ ಅಂತರ್ಜಾಲದ ಮಹಿಮೆಯಿಂದಾಗಿ ಎಲ್ಲವೂ ಎಲ್ಲರಿಗೂ ಎಲ್ಲ ಕಾಲಕ್ಕೂ ಸಿಗುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ವಿಪರ್ಯಾಸವೆಂದರೆ, ಜನರ ಕೆಟ್ಟ ಕುತೂಹಲದಿಂದಾಗಿ ಬೇಕಾದ ವಸ್ತುಗಳಿಗಿಂತ ಬೇಡದ ಅಸಂಬದ್ಧ, ಆಶ್ಲೀಲ ವಸ್ತುಗಳೇ ಜನರಿಗೆ ಯಥೇಚ್ಚವಾಗಿ ದೊರಕುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಜನತೆ, ಆಧುನಿಕ, ವಿಲಾಸಿ ಜೀವನದ ಅನಿವಾರ್ಯತೆಯಾಗಿ ಹುಟ್ಟಿಕೊಂಡ ಮೊಬೈಲ್, ಟಾಬ್ಲೆಟ್ಗಳ ಮುಖಾಂತರ ಅಂತರ್ಜಾಲದ ಕೊಂಡಿಯಿಂದ ಫೇಸ್ಬುಕ್, ವಾಟ್ಸಾಪ್ ಮತ್ತು ಇನ್ಸ್ಟಾಗ್ರಮ್ಗಳಿಗೆ ದಾಸರಾಗಿ ಸಮಾಜದಿಂದ ವಿಮುಖರಾಗಿ ಒಬ್ಬಂಟಿಯಾಗಿ ಗಂಟೆಗಟ್ಟಲೆ ಬದುಕುವ ಪರಿಸ್ಥಿತಿಯನ್ನು ಮಾಡಿಕೊಂಡಿದ್ದಾರೆ ಎಂದರೂ ತಪ್ಪಲ್ಲ. ಮನುಷ್ಯ ಯಾವತ್ತೂ ಸಂಘಜೀವಿ, ಒಂಟಿಯಾಗಿ ಆತಬಾಳಲಾರ, ಆದರೆ ಈ ಮುಖಪುಸ್ತಕ ಮತ್ತು ವಾಟ್ಸಾಪ್ಗಳಿಂದಾಗಿ ಜನರು ಯಾರು ಇಲ್ಲದೆಯೂ ಏಕಾಂಗಿಯಾಗಿದ್ದಾಗಲೂ ತನ್ನ ಸುತ್ತಲೂ ಹತ್ತು ಹಲವಾರು ಸ್ನೇಹಿತರ ಜೊತೆ ಹರಟೆ ಹೊಡೆಯಲು ಮತ್ತು ಸಂಭಾಷಿಸಲು ಸಾದ್ಯ ಮತ್ತು ಲವಲವಿಕೆಯಿಂದ ಇರಲು ಸಾದ್ಯ. ಅದೇ ರೀತಿ ತನ್ನ ಮನೆಯಲ್ಲಿ ತನ್ನೆಲ್ಲಾ ಬಂಧು ಬಳಗ ಇದ್ದರೂ, ಒಬ್ಬನೆ ಏಕಾಂಗಿಯಾಗಿ ಯಾವುದೋ ರೂಮಿನ ಮೂಲೆಯಲ್ಲಿ ಏಕಾಂಗಿಯಾಗುವಂತಹಾ ಪರಿಸ್ಥಿತಿ ತಂದುಕೊಂಡಿರುವುದು ವಿಪರ್ಯಾಸದ ಪರಮಾವದಿ ಎಂಬುವುದು ಸತ್ಯವಾದ ಮಾತು, ಅತಿಯಾದರೆ ಅಮೃತವೂ ವಿಷ ಎಂಬ ಮಾತು ಈ ಮುಖಪುಸ್ತಕ ಮತ್ತು ವಾಟ್ಸಾಪ್ಗಳಿಗೂ ಅನ್ವಯಿಸುತ್ತದೆ. ಜಗತ್ತಿನ ಜನಸಂಖ್ಯೆ ಸುಮಾರು 750 ಕೋಟಿಯಿದ್ದಲ್ಲಿ ಸುಮಾರು 220 ಕೋಟಿ ಜನರು ಮುಖ ಪುಸ್ತಕ ಬಳಸುತ್ತಿದ್ದಾರೆ. ಭಾರತದಲ್ಲಿ 2018ರ ಅಂಕಿ ಅಂಶಗಳ ಪ್ರಕಾರ 270 ಮಿಲಿಯನ್ ಮಂದಿ ಬಳಸುತ್ತಿದ್ದಾರೆ. 2004ರಲ್ಲಿ ಆರಂಭವಾದ ಈ ಮುಖಪುಸ್ತಕ ಜಗತ್ತಿನಾದ್ಯಂತ ತನ್ನ ಕದಂಬ ಬಾಹು ವಿಸ್ತರಿಸಿದೆ. ಅಮೇರಿಕಾದ ಮಾನಸಿಕ ತಜ್ಞರ ಸಂಘದ ವರದಿಯಂತೆ ಸುಮಾರು 350 ಮಿಲಿಯನ್ ಮಂದಿ ಈ ಮುಖಪುಸ್ತಕ ವ್ಯಾದಿಯಿಂದ ಬಳಲುತ್ತಿದ್ದಾರೆ. ಹೆಚ್ಚಾಗಿ ಯುವ ಜನತೆ ಈ ರೋಗದಿಂದ ಬಳಲುತ್ತಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

Also Read  ಈ 8 ರಾಶಿಯವರಿಗೆ ಶುಭಫಲ, ಕಂಕಣ ಭಾಗ್ಯ, ದಾಂಪತ್ಯದಲ್ಲಿನ ಕಲಹ, ವ್ಯಾಪಾರ ಅಭಿವೃದ್ಧಿ ಸುಧಾರಿಸುತ್ತದೆ

ಲಕ್ಷಣಗಳು ಏನು? :- ಸುಮಾರು 6 ಲಕ್ಷಣಗಳನ್ನು ನಿಗದಿಪಡಿಸಲಾಗಿದ್ದು ಈ 6ರಲ್ಲಿ 3ಕ್ಕಿಂತ ಜಾಸ್ತಿ ಲಕ್ಷಣಗಳು ವ್ಯಕ್ತಿ ಹೊಂದಿದ್ದಲ್ಲಿ ಆತ ಮುಖ ಪುಸ್ತಕ ವ್ಯಾದಿಯಿಂದ ಬಳಲುತ್ತಿದ್ದಾರೆ ಎಂದರ್ಥ.
1. ವ್ಯಕ್ತಿ ಮುಖಪುಸ್ತಕ ಬಳಸಲೇಬೇಕು ಎಂಬ ಅನಿವಾರ್ಯತೆ ಹೊಂದುತ್ತಾನೆ. ಮುಖಪುಸ್ತಕ ಬಳಸದಿದ್ದಲ್ಲಿ ಮಾನಸಿಕ ತುಮುಲ, ದುಗಡ, ಉದ್ವೇಗಕ್ಕೆ ಒಳಗಾಗಿ ತಾಳ್ಮೆ ಕಳೆದುಕೊಳ್ಳುತ್ತಾನೆ. ಅಂರ್ತಜಾಲದ ಕೊಂಡಿ ಸಿಗದೆ ಮುಖಪುಸ್ತಕವನ್ನು ಬಳಸದಂತಹಾ ಸಂದರ್ಭ ಬಂದಾಗ ವ್ಯಕ್ತಿ ತನ್ನ ಸೀಮಿತ ಕಳೆದುಕೊಳ್ಳುತ್ತಾನೆ. ಒಬ್ಬನೇ ಮಾತನಾಡುವುದು ಏಕಾಂಕಿಯಾಗಿ ಪರಿತಪಿಸುವುದು ಮಾಡುತ್ತಾನೆ.
2. ದಿನವೊಂದರಲ್ಲಿ 6ರಿಂದ 8 ಗಂಟೆಗಳಿಗಿಂತ ಜಾಸ್ತಿ ಮುಖ ಪುಸ್ತಕ ಬಳಸುತ್ತಿದ್ದಲ್ಲಿ ಖಂಡಿತವಾಗಿಯೂ ಆತ ಮುಖಪುಸ್ತಕ ವ್ಯಾದಿಯಿಂದ ಬಳುತ್ತಿದ್ದಾನೆ ಎಂದರ್ಥ.
3. ತನ್ನ ಸ್ನೇಹಿತರ ಜೊತೆ, ಹೆತ್ತವರ ಜೊತೆ, ಆಪ್ತರ ಜೊತೆ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುತ್ತಾನೆ. ಇದರ ಬದಲಾಗಿ ಮುಖಪುಸ್ತಕದಲ್ಲಿ ಹೆಚ್ಚು ತಲ್ಲಿನನಾಗುತ್ತಾನೆ. ಸ್ನೇಹಿತರ ಜೊತೆ ಕಾಫಿ ಕುಡಿಯುವುದರ ಬದಲು, ಮುಖಪುಸ್ತಕದಲ್ಲಿ ಚಾಟ್ ಮಾಡುವುದರಲ್ಲಿ ಹೆಚ್ಚು ಉಲ್ಲಸಿತನಾಗಿರುತ್ತಾನೆ. ಹೆತ್ತವರ ಫೋನ್ಗಳಿಗೂ ಉತ್ತರ ನೀಡದೆ, ಮುಖಪುಸ್ತಕದ ಮುಖಾಂತರವೇ ಹೆತ್ತವರನ್ನು ಸಂಪರ್ಕಿಸಲು ಕೋರುತ್ತಾನೆ.
4. ತನ್ನ ಪ್ರಿಯತಮೆ ಅಥವಾ ಪ್ರಿಯತಮನ ಜೊತೆ ಚಲನಚಿತ್ರ ನೋಡುವುದರ ಬದಲಾಗಿ ಅಥವಾ ಡಿನ್ನರಿಗೆ ಹೋಗುವುದರ ಬದಲಾಗಿ ಮುಖಪುಸ್ತಕದಲ್ಲಿ ಸಂಭಾಷಣೆ ಮಾಡಲು ಇಚ್ಚಿಸುತ್ತಾರೆ ತಂದೆ ತಾಯಂದಿರ ಜೊತೆ ಪಿಕ್ನಿಕ್ಗೆ ಹೋಗುವುದರ ಬದಲಾಗಿ ಮನೆಯೊಳಗೆ ಬಂದಿಯಾಗಿ ಮುಖಪುಸ್ತಕದ ಸ್ನೇಹಿತರ ಜೊತೆ ಸಂಭಾಷಿಸಲು ಇಷ್ಟ ಪಡುತ್ತಾರೆ.
5. ಮುಖ ಪುಸ್ತಕದ ಸ್ನೇಹಿತರಲ್ಲಿ ಹೆಚ್ಚು ಅಪರಿಚಿತ ಮಿತ್ರರೇ ಹೆಚ್ಚು ಇರುತ್ತಾರೆ. 10ರಲ್ಲಿ 8 ಮಂದಿ ಅಪರಿಚಿತ ಮಿತ್ರರು ಅಥವಾ ನಕಲಿ ಮುಖಪುಸ್ತಕ ಸ್ನೇಹಿತರೇ ಅಗಿರುತ್ತಾರೆ.
6. ಹೊಸ ವ್ಯಕ್ತಿಗಳನ್ನು ಬೇಟಿಯಾದಗ, ಫೇಸ್ಬುಕ್ ವಿಚಾರದ ಬಗ್ಗೆ ಮಾತಾನಾಡುತ್ತಾರೆ, ಅಪರಿಚಿತ ವ್ಯಕ್ತಿಗಳಿಗೆ ಸ್ನೇಹಿತರಾಗಲು ಕೋರಿಕೆ ಸಲ್ಲಿಸುತ್ತಾರೆ, ಅವರು ಮುಖ ಪುಸ್ತಕಕ್ಕೆ ಹಾಕಿದ ವಿಚಾರಗಳ ಬಗ್ಗೆ ಹೆಚ್ಚಿನ ಲೈಕ್ಗಳು ಬಂದಲ್ಲಿ ಅಥವಾ ಹೊಸ ಸ್ನೇಹಿತರ ಕೋರಿಕೆ ಬಂದಲ್ಲಿ ಅವರು ಮಾದಕತೆಗೆ ಒಳಗಾಗುತ್ತಾರೆ ಏನೋ ವಿಚಿತ್ರ ಅನುಭವ ಅನುಭವಿಸುತ್ತಾರೆ.

Also Read  ಉಡುಪಿ: ಅಕ್ರಮವಾಗಿ ಸ್ಪೋಟಕ ಬಳಸಿ ನಡೆಸುತ್ತಿದ್ದ ಕಲ್ಲುಕೋರೆಗೆ ಅಧಿಕಾರಿಗಳಿಂದ ದಾಳಿ


ಕೊನೆಯ ಮಾತು
2004 ರಲ್ಲಿ ಆರಂಭವಾದ ಫೇಸ್ಬುಕ್ 2018ರ ಆರಂಭದಲ್ಲಿ 500 ಮಿಲಿಯನ್ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಬಳಕೆದಾರರು ಈ ಸೇವೆ ಬಳಸಿ ಸಮಯ ವ್ಯರ್ಥ ಮಾಡುತ್ತಾರೆ, ವ್ಯಕ್ತಿಗಳ ಗೋಪ್ಯತೆಯನ್ನು ಕಾಪಾಡಲಾಗುವುದಿಲ್ಲ ಎಂಬ ವಿಚಾರಗಳಿಗೂ ಸಾಕಷ್ಟು ವಿವಾದಕ್ಕೆ ಗುರಿಯಾಗಿದೆ. ಸಿರಿಯಾ, ಇರಾನ್ ಮತ್ತು ಚೀನಾ ದೇಶಗಳಲ್ಲಿ ಹಲವಾರು ಬಾರಿ ಈ ಫೇಸ್ಬುಕ್ನ್ನು ತಡೆಹಿಡಿಯಲಾಗಿತ್ತು ಎಂಬುದನ್ನು ಗಮನಿಸಬೇಕಾದ ಅಂಶ. ಅದೇನೇ ಇರಲಿ ಪರಸ್ಪರರನ್ನು ಅರಿತುಕೊಳ್ಳಲು ಹೊಸ ಸ್ನೇಹಿತರನ್ನು ಪಡೆಯಲು, ಒಳ್ಳೆ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಫೇಸ್ಬುಕ್ ಖಂಡಿತವಾಗಿಯೂ ಸಹಕಾರಿಯಾಗಬಲ್ಲದು. ಅತಿಯಾದರೆ ಅಮೃತವೂ ವಿಷ ಎಂಬಂತೆ ಅತಿಯಾದ ಫೇಸ್ಬುಕ್ ಬಳಕೆಯಿಂದ ಖಾಸಗಿ ವಿಚಾರಗಳು ಹಂಚಿಕೊಂಡು ತೊಂದರೆಗಳಾಗುವುದು. ಅತಿಯಾದ ಬಳಕೆಯಿಂದ ಮನೋವ್ಯಾಧಿ ಗೆ ಒಳಗಾಗುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತದೆ. ಹೆಚ್ಚಾಗಿ ಯುವಜನತೆ ಈ ರೀತಿಯ ತೊಂದರೆಗಳಿಗೆ ಮತ್ತು ಮನೋವ್ಯಾಕುಲತೆ ಖಾಯಿಲೆಗೆ ಒಳಾಗುವುದು ಖೇದಕರ ವಿಚಾರ. ಫೇಸ್ಬುಕ್ನ್ನು ಹಿತಮಿತವಾಗಿ ಬಳಸಿ ತಮ್ಮ ಭೌದ್ಧಿಕ ಬುದ್ಧಿಶಕ್ತಿಯನ್ನು ಹೆಚ್ಚಿಸಿ, ಹೊಸ ಹೊಸ ಸ್ನೇಹಿತರನ್ನು ಪಡೆದು ಧನತ್ಮಾಕ ಮತ್ತು ಕ್ರಿಯಾತ್ಮಕವಾಗಿ ಬಳಸಿಕೊಂಡಲ್ಲಿ ಫೇಸ್ಬುಕ್ ಸ್ಥಾಪಿಸಿದ ಮೂಲ ಉದ್ದೇಶ ಹೆಚ್ಚು ಅರ್ಥಪೂರ್ಣವಾಗಬಹುದು. ಇಲ್ಲವಾದಲಿ ಫೇಸ್ಬುಕ್ ವ್ಯಾಧಿ ಒಂದು ಸಾಮಾಜಿಕ ಪಿಡುಗಾಗಿ ಮುಂದೊಂದು ದಿನ ಕಂಡುಬಂದಲ್ಲಿ ಆಶ್ಚರ್ಯವೇನಿಲ್ಲ. ಶೇಕಡಾ 60 ಕ್ಕಿಂತಲೂ ಹೆಚ್ಚು ಯುವಜನತೆಯನ್ನು ಹೊಂದಿರುವ ಭಾರತೀಯರು ಈ ನಿಟ್ಟಿನಲ್ಲಿ ಹೆಚ್ಚು ಜಾಗರೂಕರಾಗಿ ಈ ಫೇಸ್ಬುಕ್ ಬಳಸಬೇಕು ಅದರಲ್ಲಿಯೆ ನಮ್ಮ ದೇಶದ ಉನ್ನತಿ ಅಡಗಿದೆ.
*ಡಾ|| ಮುರಳೀ ಮೋಹನ್ ಚೂಂತಾರು
ಹೊಸಂಗಡಿ

Also Read  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ ಎಂಟನೇ ಬಲಿ..!

error: Content is protected !!
Scroll to Top