(ನ್ಯೂಸ್ ಕಡಬ) newskadaba.com, ಕಡಬ, ಜೂ.29. ಧಾರಕಾರ ಮಳೆಗೆ ಕಡಬ ಮುಖ್ಯ ಪೇಟೆಯ ರೈತ ಸಂಪರ್ಕ ಕೇಂದ್ರದ ಹತ್ತಿರವಿರುವ ರಾಜ್ಯ ಹೆದ್ದಾರಿಯ ಬದಿಯ ಧರೆ ಕುಸಿದು ವಿದ್ಯುತ್ ಕಂಬ, ಸಣ್ಣ ಮರವೊಂದು ನೆಲಕ್ಕುರುಳಿದ ಘಟನೆ ಮಂಗಳವಾರ ನಡೆದರೂ ಸಂಬಂಧಪಟ್ಟವರಿಂದ ತೆರವು ಕಾರ್ಯ ಇನ್ನೂ ನಡೆದಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಮಂಗಳವಾರದಂದು ದಿನ ಪೂರ್ತಿ ಸುರಿದ ಮಳೆಯಿಂದಾಗಿ ಸಾಯಂಕಾಲ ವೇಳೆಗೆ ಮಣ್ಣು ಸಡಿಲಗೊಂಡು ಧರೆಯ ಮೇಲಿದ್ದ ವಿದ್ಯುತ್ ಕಂಬ ಹಾಗೂ ಸಣ್ಣ ಮರ ಜೊತೆಯಾಗಿ ಕುಸಿದು ರಾಜ್ಯ ಹೆದ್ದಾರಿ ಮೇಲೆ ಬಿದ್ದಿದೆ. ಅಲ್ಲದೆ ಧರೆಯ ಪಕ್ಕದಲ್ಲಿದ್ದ ಮೀನಿನ ವ್ಯಾಪರ ಮಾಡುತ್ತಿದ್ದ ಶೆಡ್ನ ಶೀಟಿಗೆ ಹಾನಿಯಾಗಿತ್ತು. ಘಟನೆ ನಡೆದು ನಾಲ್ಕು ದಿನಗಳಾತ್ತಾ ಬಂದರೂ ತೆರವು ಗೊಳಿಸದಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕುಸಿತಗೊಂಡ ಸಮೀಪದಿಂದಲೇ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಓಡಾಟ ಮಾಡುತ್ತಾರೆ. ಅಲ್ಲದೆ ಹೆದ್ದಾರಿಯಲ್ಲಿ ಚಲಿಸುವ ವಾಹನಕ್ಕೂ ಅಪಾಯವಿದೆ. ಅಪಾಯದಲ್ಲಿ ಇನ್ನೂ ನಾಲ್ಕು ಕಂಬಗಳಿದ್ದು, ಮಣ್ಣು ಕೂಡ ಸ್ವಲ್ಪ ಕುಸಿಯುತ್ತಿರುವುದರಿಂದ ಅಪಾಯ ಇನ್ನಷ್ಟೂ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ವ್ಯಕ್ತವಾಗಿದೆ.
ಘಟನೆ ಬಗ್ಗೆ ಲೋಕೋಪಯೋಗಿ ಇಲಾಖೆ ಮತ್ತು ಕಡಬ ಕ್ಷೇತ್ರ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ತೆರವುಗೊಳಿಸಲು ಲಿಖಿತ ಮನವಿ ಮಾಡಿಕೊಳ್ಳಲಾಗಿದೆ. ಮೆಸ್ಕಾಂ ಇಲಾಖೆಗೆ ವಿದ್ಯುತ್ ಕಂಬ ತೆರವಿಗೆ ಈಗಾಗಲೇ ಸೂಚಿಸಲಾಗಿದೆ. ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ತಕ್ಷಣ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
– ಬಾಬು ಮುಗೇರ, ಅಧ್ಯಕ್ಷರು, ಕಡಬ ಗ್ರಾಮ ಪಂಚಾಯಿತಿ