(ನ್ಯೂಸ್ ಕಡಬ) newskadaba.com ಬೆಳ್ಳಾರೆ ಜೂ,25. ಯುವ ಜೇಸಿ ಬೆಳ್ಳಾರೆ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವರುಗಳ ಆಶ್ರಯದಲ್ಲಿ ಕೆ.ಮಂ.ಸಿ ಆಸ್ಪತ್ರೆ, ಕೆ.ವಿ.ಜಿ ದಂತ ಕಾಲೇಜು, ಇಂಡಿಯನ್ ರೆಡ್ಕ್ರಾಸ್ ಬ್ಲಡ್ ಬ್ಯಾಂಕ್ ಮಂಗಳೂರು ಇವರುಗಳ ಸಹಕಾರದೊಂದಿಗೆ ದಿನಾಂಕ 24 ಭಾನುವಾರದಂದು ಕಲ್ಮಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದರ ವಠಾರದಲ್ಲಿ ಬೃಹತ್ ವೈದ್ಯಕೀಯ ರಕ್ತದಾನ ಮತ್ತು ದಂತ ಚಿಕಿತ್ಸಾ ಶಿಬಿರ ಜರುಗಿತು. ಬೆಳ್ಳಾರೆಯ ಖ್ಯಾತ ವೈದ್ಯರಾಗಿದ್ದ ದಿವಂಗತ ಡಾ|| ಎಸ್. ನಾರಾಯಣ ಭಟ್ ಇವರ ಸ್ಮರಣಾರ್ಥವಾಗಿ ನಡೆದ ಈ ಶಿಬಿರವನ್ನು ಶ್ರೀಮತಿ ಮಹಾಲಕ್ಷ್ಮೀ ನಾರಾಯಣ ಭಟ್, ಅನುಪಮ ಮೆಡಿಕಲ್ಸ್ ಬೆಳ್ಳಾರೆ ಇವರು ದೀಪ ಬೆಳಗಿಸಿ ಉದ್ವಾಟಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ (ನಿ.) ಇದರ ಅಧ್ಯಕ್ಷರಾದ ಶ್ರೀ ಉದಯಕುಮಾರ್ ಬೆಟ್ಟ ಇವರು ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಇಂತಹಾ ಶಿಬಿರಗಳು ಹೆಚ್ಚು ಹೆಚ್ಚು ನಡೆಯಬೇಕು. ವೈದ್ಯರು ರೋಗಿಗಳ ಬಳಿ ಬಂದು ಸೇವೆ ನೀಡುವ ಇಂತಹಾ ಶಿಬಿರಗಳು ಜನರಿಗೆ ಹೆಚ್ಚು ಉಪಯುಕ್ತ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇನ್ನೊರ್ವ ಗಣ್ಯರಾದ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಮಾತನಾಡಿ ಇಂದಿನ ದಿನಗಳಲ್ಲಿ ನಮ್ಮ ಆಹಾರ ಪದ್ಧತಿ, ಜೀವನ ಶೈಲಿ ಮತ್ತು ಒತ್ತಡದ ಬದುಕಿನಿಂದಾಗಿ ಹೆಚ್ಚು ರೋಗ ಬರುತ್ತದೆ. ಜೀವನ ಶೈಲಿ ಬದಲಿಸಿ ಆರೋಗ್ಯಪೂರ್ಣ ಆಹಾರ ಸೇವಿಸಿದಲ್ಲಿ ಹೆಚ್ಚು ಕಾಲ ಬದುಕಬಹುದು ಎಂದು ಅಭಿಪ್ರಾಯ ಪಟ್ಟರು. ಶ್ರೀ ಧರ್ಮಣ್ಣ ಗರಡಿಮನೆ, ಗ್ರಾಮ ಪಂಚಾಯತ್ ಕಲ್ಮಡ್ಕ ಇದರ ಅಧ್ಯಕ್ಷರು ಮತ್ತು ಎಸ್.ಡಿ.ಎಂ.ಸಿ ಸಹಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕ ಇದರ ಅಧ್ಯಕ್ಷರಾದ ಶ್ರೀ ರಮೇಶ್ ಕಾಜಿಲ ಇವರು ಅತಿಥಿಗಳಾಗಿ ಈ ಶಿಬಿರದಲ್ಲಿ ಭಾಗವಹಿಸಿದ್ದರು. ಶ್ರೀಯುತ ಮುರಲೀಧರ ಸರಳಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೇಸಿಐ ಬೆಳ್ಳಾರೆ ಇದರ ಅಧ್ಯಕ್ಷರಾದ ಜೇಸಿ ಜಯರಾಮ ಉಮಿಕ್ಕಳ ಇವರು ಅಧ್ಯಕ್ಷತೆಯನ್ನು ವಹಿಸಿದ್ದರು. ಯುವ ಜೇಸೀ ವಿಭಾಗ ಬೆಳ್ಳಾರೆಯ ಅಧ್ಯಕ್ಷರಾದ ಜೆ ಜೆ ಮೋಕ್ಷಿತ್, ಶ್ರೀ ಪುಷ್ಪನಾಯ್ಕ, ಅಧ್ಯಕ್ಷರು ಮಾಳಪ್ಪಮಕ್ಕಿ, ಸ್ಪೋಟ್ಸ್ ಕ್ಲಬ್(ರಿ.) ಕಲ್ಮಡ್ಕ, ಶ್ರೀ ಕರುಣಾಕರ ಶೆಟ್ಟಿಗದ್ದೆ, ಅಧ್ಯಕ್ಷರು ಯುವಸ್ಪೂರ್ತಿ ಸೇವಾ ಸಮಿತಿ (ರಿ.) ಕಲ್ಮಡ್ಕ, ಶ್ರೀಮತಿ ವಜ್ರಾಕ್ಷಿ, ಮುಖ್ಯೋಪಧ್ಯಾಯಿನಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮಾರು 25 ಮಂದಿ ರಕ್ತದಾನ ಮಾಡಿದರು ಮತ್ತು 200 ಮಂದಿ ವೈದ್ಯಕೀಯ ಶಿಬಿರದ ಪ್ರಯೋಜನ ಪಡೆದರು. ಜೇಸಿ ಪ್ರದೀಪ್ ಇವರು ಸ್ವಾಗತ ಬಾಷಣ ಮಾಡಿದರು. ಜೇಸೀ ರವಿಕಿರಣ್ ಎಡಪತ್ಯ ಇವರು ವಂದನಾರ್ಪಣೆ ಮಾಡಿದರು. ಕುಮಾರಿ ಅನುಪಮಲಕ್ಷ್ಮೀ ಇವರು ಪ್ರಾರ್ಥನೆ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.