ರಾಮಕುಂಜ: ವಿಜ್ಞಾನ ಹಾಗೂ ಗಣಿತ ಪ್ರಯೋಗಾಲಯ ಉದ್ಘಾಟನೆ

(ನ್ಯೂಸ್ ಕಡಬ)newskadaba.com ರಾಮಕುಂಜ,ಜೂ.23. ಬೆಂಗಳೂರಿನ ಸಿಸ್ಕೋ ಸಂಭ್ರಮ, ಯೂತ್ ಫಾರ್ ಸೇವಾ ಇದರ ಪ್ರಾಯೋಜಕತ್ವದಲ್ಲಿ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸುಮಾರು 13ಲಕ್ಷ ರೂ. ವೆಚ್ಚದಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ‘ರಾಮನ್’ ಹಾಗೂ ಗಣಿತ ಪ್ರಯೋಗಾಲಯ ‘ಬ್ರಹ್ಮಗುಪ್ತ’ ಇದರ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದ ಕಡಬ ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ರಮೇಶ್ ಕಲ್ಪುರೆ ಮಾತನಾಡಿ ಗ್ರಾಮೀಣ ಪ್ರದೇಶದ ಬಡಜನತೆ ಕಡಿಮೆ ಖರ್ಚಿನಲ್ಲಿ ಉತ್ತಮ ಹಾಗೂ ಸಂಸ್ಕಾರಯುತ ಶಿಕ್ಷಣವನ್ನು ಪಡೆಯಬೇಕು ಎನ್ನುವ ಮಹಾತ್ವಾಕಾಂಕ್ಷೆಯೊಂದಿಗೆ ಪೇಜಾವರ ಮಠಾಧೀಶ ಶ್ರೀಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಹಿರಿಯತನದಲ್ಲಿ ನಡೆಯುತ್ತಿರುವ ಶ್ರೀರಾಮಕುಂಜೇಶ್ವರ ವಿದ್ಯಾಸಂಸ್ಥೆ ನಾಡಿಗೆ ಉತ್ತಮ ಪ್ರಜೆಗಳನ್ನು ಸಮರ್ಪಿಸುತಿದೆ. ಇಲ್ಲಿನ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯತ್ಗೆ ಭದ್ರ ಬುನಾದಿ ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಇಂತಹ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಳ್ಳುವುದು ನಮ್ಮ ಧ್ಯೇಯವಾಗಬೇಕು. ಇಂತಹ ಶಿಕ್ಷಣ ಸಂಸ್ಥೆಯ ಮೂಲಭೂತ ವ್ಯವಸ್ಥೆ ಇನ್ನಷ್ಟು ಸದೃಢಗೊಳ್ಳುವ ನಿಟ್ಟಿನಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಗಣಿತ ಪ್ರಯೋಗಾಲಯವನ್ನು ಉದ್ಘಾಟಿಸಿದ ಗಣಿತ ವಿಷಯ ಪರಿವೀಕ್ಷಕ ರಾಧಾಕೃಷ್ಣ ಭಟ್ ಮಾತನಾಡಿ ಪ್ರತೀ ಶಾಲೆಗಳಲ್ಲಿ ಗಣಿತ ಪ್ರಯೋಗಾಲಯ ಆಗುವುದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ಮುಕ್ತ ಅವಕಾಶ ದೊರೆಯುತ್ತದೆ. ಈ ಹಿನ್ನಲೆಯಲ್ಲಿ ರಾಮಕುಂಜದಂತಹ ವಿದ್ಯಾಸಂಸ್ಥೆಯಲ್ಲಿ ಪ್ರಯೋಗಾಲಯವನ್ನು ಅವಲಂಭಿಸುವುದು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.

Also Read  ಭತ್ತದಲ್ಲಿ ಎಲೆ ಸುರುಳಿ ಹಾಗೂ ಕೊಳವೆ ಹುಳುವಿನ ಭಾದೆಗೆ ಪರಿಹಾರ

ಸಭಾಧ್ಯಕ್ಷತೆ ವಹಿಸಿದ್ದ ಶ್ರೀರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್ ಮಾತನಾಡಿ ಕನ್ನಡ ಮಾಧ್ಯಮ ಶಾಲೆಗಳಿಗೆ ವಿದ್ಯಾರ್ಥಿಗಳು ವಿರಳವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ನಮ್ಮ ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಕಳೆದ ಬಾರಿ ಎಸ್ಎಸ್ಎಲ್ಸಿ ಯಲ್ಲಿ 128 ವಿದ್ಯಾರ್ಥಿಗಳ ಪೈಕಿ ಕೇವಲ 2 ವಿದ್ಯಾರ್ಥಿಗಳು ತಲಾ ಒಂದು ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಫಲಿತಾಂಶ ಬರುವಲ್ಲಿ ಸಂಸ್ಥೆ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ನಮ್ಮಲ್ಲಿ ಎಲ್ಲಾ ಪ್ರಥಮ ಶ್ರೇಣಿಯಿಂದ ಹಿಡಿದು ಜಸ್ಟ್ ಪಾಸಾದ ವಿದ್ಯಾರ್ಥಿಗಳನ್ನು ಕೂಡ ಪ್ರವೇಶ ಅವಕಾಶ ಕಲ್ಪಿಸಿ ಅವರಿಗೆ ವಿದ್ಯಾಭ್ಯಾಸಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ನಮ್ಮ ಈ ಶ್ರಮಕ್ಕೆ ಯೂತ್ ಫಾರ್ ಸೇವಾ ಸಂಸ್ಥೆ ಸದಾ ಬೆಂಬಲವಾಗಿ ನಿಲ್ಲುತ್ತದೆ ಎಂದರು. ಯೂತ್ ಫಾರ್ ಸೇವಾ ಸಂಸ್ಥೆಯ ಪ್ರತಿನಿಧಿ ಮಂಜುನಾಥ ಬಿಢೆ ಹಾಗೂ ರಾಜೇಶ್ ಕೆ ಅತಿಥಿಗಳಾಗಿ ಮಾತನಾಡಿದರು. ಶ್ರೀರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಸತೀಶ್ ಭಟ್ ಪ್ರಸ್ತಾವಣೆಗೈದರು. ಶಿಕ್ಷಕ ಪ್ರವೀಣ್ ಸ್ವಾಗತಿಸಿದರು. ಶಿಕ್ಷಕ ಜನಾರ್ಧನ ವಂದಿಸಿದರು. ಶಿಕ್ಷಕಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.

Also Read  7 ಮಂದಿ ಮೀನುಗಾರರ ಅಪಹರಿಸಿ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ದೋಚಿದ ಅಪರಿಚಿತರು

 

error: Content is protected !!
Scroll to Top