(ನ್ಯೂಸ್ ಕಡಬ)newskadaba.com ಬೆಳ್ಳಾರೆ,ಜೂ.23. ಜೆಸಿಐ, ಯುವ ಜೇಸಿ ವಿಭಾಗ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ಇವುಗಳ ಆಶ್ರಯದಲ್ಲಿ ಕೆ.ಎಮ್.ಸಿ ಆಸ್ಪತ್ರೆ ಮಂಗಳೂರು, ಕೆ.ವಿ.ಜಿ ದಂತ ಮಹಾವಿದ್ಯಾಲಯ ಸುಳ್ಯ ಮತ್ತು ಇಂಡಿಯನ್ ರೆಡ್ಕ್ರಾಸ್ ರಕ್ತದ ನಿಧಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರುಗಳ ಸಹಕಾರದೊಂದಿಗೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕಲ್ಮಡ್ಕದ ಸರಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಬೆಳ್ಳಾರೆಯ ಪ್ರತಿಷ್ಠಿತ ವೈದ್ಯರಾಗಿದ್ದ ದಿವಂಗತ ಡಾ|| ನಾರಾಯಣ ಭಟ್ ಇವರ ಸ್ಮರಾಣಾರ್ಥ ಬೃಹತ್ ವೈದ್ಯಕೀಯ, ದಂತ ಚಿಕಿತ್ಸಾ ಮತ್ತು ರಕ್ತದಾನ ಶಿಬಿರ ದಿನಾಂಕ 24/06/2018ನೇ ಭಾನುವಾರದಂದು ನಡೆಯಲಿದೆ. ಮಂಗಳೂರಿನ ನುರಿತ ವೈದ್ಯರ ತಂಡ ಮತ್ತು ತಂತ್ರಜ್ಞರ ತಂಡ ಈ ಶಿಬಿರವನ್ನು ನಡೆಸಿಕೊಡಲಿದೆ. ಹಿರಿಯ ವೈದ್ಯರು ಮತ್ತು ಜಿಲ್ಲಾ ಗ್ರಹರಕ್ಷಕ ದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ನೇತೃತ್ವದಲ್ಲಿ ಈ ಶಿಬಿರ ನಡೆಯಲಿದೆ.
ದಿ. ಡಾ|| ನಾರಾಯಣ ಭಟ್ ಇವರ ಧರ್ಮಪತ್ನಿ ಶ್ರೀಮತಿ ಮಹಾಲಕ್ಷ್ಮಿ ನಾರಾಯಣ ಭಟ್ ಇವರು ಈ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದಾರೆ. ವೈದ್ಯಕೀಯ ಶಿಬಿರದಲ್ಲಿ ದಂತ ಚಿಕಿತ್ಸೆ, ಕಿವಿ ಮೂಗು ಗಂಟಲು ವಿಭಾಗ, ನೇತ್ರ ರೋಗ, ಮಕ್ಕಳ ರೋಗ, ಸ್ತ್ರೀ ರೋಗ, ಚರ್ಮ ರೋಗ, ಮೂಳೆ ವಿಭಾಗದ ತಜ್ಞರು ಆಗಮಿಸಲಿದ್ದಾರೆ. ಸುಳ್ಯ ತಾಲೂಕಿನಾದ್ಯಂತ ಡೆಂಗ್ಯೂ ಮತು ಚಿಕನ್ಗೂನ್ಯ ಮುಂತಾದ ರೋಗವಿರುದರಿಂದ ಜಿಲ್ಲೆಯಲ್ಲಿ ರಕ್ತದ ಅಭಾವವಿದ್ದು ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕೆಂದು ಡಾ|| ಮುರಲೀ ಮೋಹನ್ ಚೂಂತಾರು ಇವರು ಜನರಲ್ಲಿ ವಿನಂತಿ ಮನವಿ ಮಾಡಿದ್ದಾರೆ. ಈ ಶಿಬಿರದ ಸದುಪಯೋಗವನ್ನು ಗ್ರಾಮೀಣ ಭಾಗದ ಜನರು ಹೆಚ್ಚು ಪಡೆದುಕೊಳ್ಳಬೇಕೆಂದು ಬೆಳ್ಳಾರೆ ಜೆ.ಸಿ.ಐ ಅಧ್ಯಕ್ಷರಾದ ಜಯರಾಮ್ ಉಮಿಕ್ಕಳ ಮನವಿ ಮಾಡಿದ್ದಾರೆ. ಅಗತ್ಯವಿದ್ದ ರೋಗಿಗಳಿಗೆ ಉಚಿತ ಕನ್ನಡಕವನ್ನು ನೀಡಲಾಗುವುದು ಎಂದು ಕಾರ್ಯಕ್ರಮದ ರೂವಾರಿ ದಿ. ಡಾ| ನಾರಾಯಣ ಭಟ್ ಇವರ ಪುತ್ರ ಮುರಳೀಧರ ಇವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಅಗತ್ಯವಿದ್ದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಕೆ.ಎಮ್.ಸಿ ಆಸ್ಪತ್ರೆಗೆ ಕಳುಹಿಸಿ ಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.