
(ನ್ಯೂಸ್ ಕಡಬ) newskadaba.com, ನ 06 . ಮಂಗಳೂರು: ಎಲೆಕ್ಟ್ರಿಷಿಯನ್ ಒಬ್ಬರನ್ನು ತಡೆದು ಹಲ್ಲೆ ನಡೆಸಿ, ಬೆದರಿಕೆ ಹಾಕಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಪಾಂಡೇಶ್ವರ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ.ವಿಟ್ಲ ಮುಡ್ನೂರು ಮೂಲದ ರವಿರಾಜ್ ಎಂಬವರು ದೂರು ನೀಡಿದ್ದು, ಪಾಂಡೇಶ್ವರದ ಶಿವನಗರದಲ್ಲಿ ವಾಸವಿದ್ದು ಕಂಕನಾಡಿಯ ಖಾಸಗಿ ಸಂಸ್ಥೆಯಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.
ದೂರಿನ ಪ್ರಕಾರ, ಆಗಸ್ಟ್ 25 ಮತ್ತು 27ರಂದು ರಾತ್ರಿ ವೇಳೆ ಹೊಯ್ಸಳ ವಾಹನದಲ್ಲಿ ಬಂದ ಸಿಬ್ಬಂದಿ ರವಿರಾಜ್ ಅವರನ್ನು ತಡೆದು ಹಲ್ಲೆ ನಡೆಸಿ, ಮೊಬೈಲ್, ನಗದು ಹಾಗೂ ಎಟಿಎಂ ಕಾರ್ಡ್ಗಳನ್ನು ಕಸಿದುಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಪರಿಶೀಲಿಸಿ, ಬೆದರಿಕೆ ಹಾಕಿ ಮಂಗಳಾದೇವಿ ಸಮೀಪದ ಎಟಿಎಂನಿಂದ ಬಲವಂತವಾಗಿ ₹3,000 ಹಣ ಡ್ರಾ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, ನವೆಂಬರ್ 4ರಂದು ಮತ್ತೆ ಅವರ ಮೊಬೈಲ್ ಹಾಗೂ ದ್ವಿಚಕ್ರ ವಾಹನದ ಕೀಲಿಯನ್ನು ಕಸಿದುಕೊಂಡು ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪಾಂಡೇಶ್ವರ ಠಾಣೆಯ ಚಾಲಕ ಹಿರಣ್ಣ ಬೆನ್ನಿ ಹಾಗೂ ಸಿಬ್ಬಂದಿಗಳಾದ ಶಿವರಾಜ್ ಮತ್ತು ಉಮಾಕಾಂತ್ ವಿರುದ್ಧ ರವಿರಾಜ್ ದೂರು ನೀಡಿದ್ದು, ಹಲ್ಲೆ, ಬೆದರಿಕೆ ಮತ್ತು ಸುಲಿಗೆ ಆರೋಪಗಳ ಕುರಿತು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.




