(ನ್ಯೂಸ್ ಕಡಬ) newskadaba.com ಕಡಬ, ಜೂ.12. ಮಳೆಯ ಪ್ರಮಾಣ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯ ವಿವಿಧೆಡೆ ಗುಡ್ಡ ಕುಸಿದ ಪರಿಣಾಮ ಸಂಚಾರಕ್ಕೆ ತೊಡಕುಂಟಾಗಿದೆ.
ಸೋಮವಾರದಂದು ಘಾಟ್ ರಸ್ತೆಯ ಎರಡನೇ ಹಾಗೂ ಮೂರನೇ ತಿರುವಿನ ಮಧ್ಯೆ ಮಣ್ಣು ಕುಸಿದು ಬಿದ್ದುದರಿಂದ ರಸ್ತೆ ತಡೆಯುಂಟಾಗಿ ಹಸನಬ್ಬ ಚಾರ್ಮಾಡಿ ಹಾಗೂ ಅವರ ತಂಡವು ಶ್ರಮವಹಿಸಿ ಒಂದು ಹಂತದ ತಡೆಯನ್ನು ತೆರವುಗೊಳಿಸಿದ ಪರಿಣಾಮ ಏಕಮುಖ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಆದರೆ ಘಾಟಿ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಮಂಗಳವಾರದಂದು ಮತ್ತೆ ಬ್ಲಾಕ್ ಆಗಿದ್ದು, ಚಾರ್ಮಾಡಿಯ ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರು, ಹಾಸನ, ಚಿಕ್ಕಮಗಳೂರು ಮತ್ತಿತರ ಭಾಗಗಳಿಂದ ಧರ್ಮಸ್ಥಳ, ಮಂಗಳೂರು, ಉಡುಪಿ ಕಡೆಗೆ ಪ್ರಯಾಣಿಸುವ ಪ್ರಯಾಣಿಕರು ಕುದುರೆಮುಖ ಅಥವಾ ಸಂಪಾಜೆ ಘಾಟಿ ರಸ್ತೆಯನ್ನು ಬಳಸುವುದು ಒಳಿತು.