ಜನಗಣತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಇನ್ನು ಮುಂದೆ ಖಾಸಗಿ ಶಿಕ್ಷಕರಿಗೂ ಗಣತಿದಾರರ ಜವಾಬ್ದಾರಿ!

(ನ್ಯೂಸ್‌ ಕಡಬ) newskadaba.com, ಅ. 17 . ನವದೆಹಲಿ: ದೇಶದಲ್ಲಿ ಮುಂಬರುವ ಜನಗಣತಿ ಕಾರ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಪ್ರಮುಖ ತಿದ್ದುಪಡಿ ತಂದಿದೆ. ಇನ್ನುಮುಂದೆ ಸರ್ಕಾರಿ ಶಾಲೆಗಳ ಶಿಕ್ಷಕರ ಜೊತೆಗೆ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರನ್ನೂ ಗಣತಿದಾರರಾಗಿ ನೇಮಿಸಿಕೊಳ್ಳಲು ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕುರಿತು ಭಾರತದ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.

ಸರ್ಕಾರಿ, ಸ್ಥಳೀಯ ಸಂಸ್ಥೆಗಳು ಹಾಗೂ ಅನುದಾನಿತ-ಅನುದಾನರಹಿತ ಖಾಸಗಿ ಸಂಸ್ಥೆಗಳ ಶಿಕ್ಷಕರು, ಕೇಂದ್ರ-ರಾಜ್ಯ ಸರ್ಕಾರದ ಗುಮಾಸ್ತರು, ಸಾರ್ವಜನಿಕ ವಲಯದ ನೌಕರರು, ಬ್ಯಾಂಕ್ ಹಾಗೂ ವಿವಿಧ ಕಂಪನಿಗಳ ಅಧಿಕಾರಿಗಳನ್ನು ಗಣತಿದಾರರಾಗಿ ನಿಯೋಜಿಸಬಹುದಾಗಿದೆ.

ಖಾಸಗಿ ಅನುದಾನರಹಿತ ಶಾಲಾ ಬೋಧಕ ಸಿಬ್ಬಂದಿಯನ್ನು ಜನಗಣತಿ ಕರ್ತವ್ಯಕ್ಕೆ ನಿಯೋಜಿಸುವುದನ್ನು ಪ್ರಶ್ನಿಸಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ 1990ರ ಜನಗಣತಿ ನಿಯಮಗಳಿಗೆ ಸ್ಪಷ್ಟತೆ ತಂದು ಹೊಸ ಅಧಿಸೂಚನೆ ಹೊರಡಿಸಲಾಗಿದೆ.

ಗೋವಾ, ಉತ್ತರ ಪ್ರದೇಶ, ಪಂಜಾಬ್ ಮತ್ತು ಉತ್ತರಾಖಂಡದ ಹಿಮಪೀಡಿತ ಪ್ರದೇಶಗಳನ್ನು ಹೊರತುಪಡಿಸಿ, ಇತರೆಡೆಗಳಲ್ಲಿ 2026ರ ಡಿಸೆಂಬರ್ 1ರಿಂದ 2027ರ ಜನವರಿ 4ರವರೆಗೆ ಜನಸಂಖ್ಯೆ ಗಣತಿ ನಡೆಯಲಿದೆ. ಉಳಿದ ಭಾಗಗಳಲ್ಲಿ ಫೆಬ್ರವರಿಯಲ್ಲಿ ಪ್ರಕ್ರಿಯೆ ಆರಂಭವಾಗಲಿದ್ದು, ಕುಟುಂಬಗಳ ಸಾಮಾಜಿಕ-ಸಾಂಸ್ಕೃತಿಕ, ಆರ್ಥಿಕ ಹಾಗೂ ವಲಸೆ ವಿವರಗಳನ್ನು ಸಂಗ್ರಹಿಸಲಾಗುತ್ತದೆ.

Scroll to Top