
(ನ್ಯೂಸ್ ಕಡಬ) newskadaba.com, ಅ. 10 . ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮೃತಪಟ್ಟ ಭವಿಷ್ಯ ನಿಧಿ ಚಂದಾದಾರರ ಕುಟುಂಬಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ಮಂಗಳೂರು ಪ್ರಾದೇಶಿಕ ಕಚೇರಿಯು ತ್ವರಿತವಾಗಿ ಪರಿಹಾರ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಿದೆ.ಸೆಪ್ಟೆಂಬರ್ 30, 2026 ರಂದು MRPL ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಭವಿಷ್ಯ ನಿಧಿ ಚಂದಾದಾರರಾದ ಶ್ರೀ ಮನೀಶ್ ಕರ್ಕಡ ಮೃತಪಟ್ಟಿದ್ದರು.
ಮೃತ ನೌಕರರ ಕುಟುಂಬಕ್ಕೆ ಸಲ್ಲಬೇಕಾದ ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಾಗೂ ಉದ್ಯೋಗಿಗಳ ಠೇವಣಿ ಆಧಾರಿತ ವಿಮಾ ಸೌಲಭ್ಯಗಳ ಕ್ಷೇಮುಗಳನ್ನು ಅಕ್ಟೋಬರ್ 8, 2026ರಂದೇ ಇತ್ಯರ್ಥಪಡಿಸಿ ಹಣ ಪಾವತಿಸಲಾಗಿದೆ.ಉದ್ಯೋಗಿಗಳ ಪಿಂಚಣಿ ಯೋಜನೆಯಡಿ ಕುಟುಂಬಕ್ಕೆ ಮಾಸಿಕ ಪಿಂಚಣಿಯನ್ನು ಮಂಜೂರು ಮಾಡಿ, ಪಾವತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.
ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಸಂದೀಪ್ ಬಿಸ್ವಾಸ್ ಹಾಗೂ ಅಧಿಕಾರಿಗಳ ತಂಡವು ಅಕ್ಟೋಬರ್ 9 ರಂದು ಮೃತರ ನಿವಾಸಕ್ಕೆ ಭೇಟಿ ನೀಡಿ, ಫಲಾನುಭವಿಗೆ ಪಿಂಚಣಿ ಪಾವತಿ ಆದೇಶವನ್ನು (PPO) ಹಸ್ತಾಂತರಿಸುವ ಮೂಲಕ ಮಾನವೀಯ ಕಾಳಜಿ ಮೆರೆದಿದೆ.




