ಬಲ್ಯ: ಜಾಗದ ವಿಚಾರದಲ್ಲಿ ಪರಸ್ಪರ ಹಲ್ಲೆ ► ದೂರು – ಪ್ರತಿ ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.08. ಜಾಗದ ತಕರಾರಿನ ಹಿನ್ನೆಲೆಯಲ್ಲಿ ವ್ಯಕ್ತಿಗಳಿಬ್ಬರು ಪರಸ್ಪರ ಹಲ್ಲೆ‌ ಮಾಡಿಕೊಂಡ ಘಟನೆ ಠಾಣಾ ವ್ಯಾಪ್ತಿಯ ಬಲ್ಯ ಗ್ರಾಮದ ದೇರಾಜೆ ಕ್ರಾಸ್ ಎಂಬಲ್ಲಿ ಗುರುವಾರದಂದು ನಡೆದಿದೆ.

ಬಲ್ಯ ಗ್ರಾಮದ ಸಂಪಡ್ಕ ನಿವಾಸಿ, ದೇರಾಜೆ ಕ್ರಾಸ್ ಬಳಿಯ ಅಂಗಡಿ ವ್ಯಾಪಾರಿ ಗೋಪಾಲಕೃಷ್ಣ ಎಂಬವರಿಗೆ ದೇರಾಜೆ ಕ್ರಾಸ್ ನಿವಾಸಿ ಗಿರೀಶ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಂಗಡಿಯೊಳಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇವರಿಬ್ಬರ ಜಾಗ ಅಕ್ಕಪಕ್ಕದಲ್ಲಿದ್ದು ಜಾಗದ ಒಂದು ಭಾಗದ ವಿಚಾರದಲ್ಲಿ ಕಳೆದ ಕೆಲವು ವರ್ಷಗಳಿಂದ ತಕರಾರಿತ್ತು. ಗೋಪಾಲಕೃಷ್ಣ ಅವರ ಕೃಷಿ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದ ಗಿರೀಶ್ ನಡೆಯನ್ನು ಅಕ್ಷೇಪಿಸಿದಕ್ಕೆ ದ್ವೇಷ ಸಾಧಿಸಿ ವ್ಯಾಪಾರ ನಡೆಸುತ್ತಿದ್ದ ಸಂದರ್ಭ ಅಂಗಡಿಯೊಳಗೆ ನುಗ್ಗಿ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗೋಪಾಲಕೃಷ್ಣ ಅವರು ತಿಳಿಸಿದ್ದಾರೆ. ಹಲ್ಲೆಗೊಳಗಾದ ಗೋಪಾಲಕೃಷ್ಣ ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆ ದಾಖಲಾಗಿದ್ದಾರೆ. ಇತ್ತ ಗಿರೀಶ್ ತನಗೆ ಗೋಪಾಲಕೃಷ್ಣ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಎರಡೂ ಕಡೆಯಿಂದಲೂ ದೂರನ್ನು ಸ್ವೀಕರಿಸಿರುವ ಕಡಬ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

Scroll to Top