(ನ್ಯೂಸ್ ಕಡಬ) newskadaba.com, ಆ.11 ನವದೆಹಲಿ: ಮುಂಬರುವ ಆ ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಅಂಗಳದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ‘ವಂದೇ ಮಾತರಂ’ ಗೀತೆಯನ್ನು ಗಾಯನ ಮಾಡಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಕೆಂಪುಕೋಟೆಯ ಸಮಾರಂಭದಲ್ಲಿ ‘ವಂದೇ ಮಾತರಂ’ ಗೀತೆಯ ಬಳಿಕ ರಾಷ್ಟ್ರಗೀತೆ ‘ಜನಗಣಮನ’ ಪ್ರಸ್ತುತಗೊಳ್ಳಲಿದೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಸಾಂಪ್ರದಾಯಿಕ ಸ್ವಾತಂತ್ರ್ಯ ದಿನದ ಭಾಷಣ ಮಾಡಲಿದ್ದಾರೆ.
ಈ ಬಾರಿಯ ಕಾರ್ಯಕ್ರಮದ ಪ್ರಮುಖ ಪರಿಕಲ್ಪನೆ (ಥೀಮ್) ‘ಯುವ ಶಕ್ತಿ‘ ಆಗಿದ್ದು, 2047ರ ವೇಳೆಗೆ ಭಾರತವನ್ನು ‘ವಿಕಸಿತ ಭಾರತ’ವನ್ನಾಗಿ ಮಾಡುವಲ್ಲಿ ಯುವಜನರ ಪಾತ್ರವನ್ನು ಮುನ್ನೆಲೆಗೆ ತರುವುದು ಇದರ ಉದ್ದೇಶವಾಗಿದೆ.ಇತ್ತೀಚೆಗೆ ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳಿಗೂ ಹಾಗೂ ಈ ಬಾರಿಯ ‘ಯುವ ಶಕ್ತಿ’ ಥೀಮ್‌ಗೂ ಯಾವುದೇ ಸಂಬಂಧವಿಲ್ಲ; ದೇಶದ ಅಭಿವೃದ್ಧಿ ಹಾಗೂ ಭವಿಷ್ಯ ರೂಪಿಸುವಲ್ಲಿ ಯುವಕರೇ ಮೂಲಶಕ್ತಿಯಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.
1950ರ ಜನವರಿ 24ರಂದು ಸಂವಿಧಾನ ಸಭೆಯ ಅಂತಿಮ ಸಭೆಯಲ್ಲಿ ಅಧ್ಯಕ್ಷ ಡಾ. ರಾಜೇಂದ್ರ ಪ್ರಸಾದ್ ಅವರು ‘ಜನಗಣಮನ’ವನ್ನು ರಾಷ್ಟ್ರಗೀತೆಯಾಗಿ ಹಾಗೂ ‘ವಂದೇ ಮಾತರಂ’ಗೆ ರಾಷ್ಟ್ರಗೀತೆಗೆ ಸಮಾನವಾದ ಗೌರವ ಮತ್ತು ಸ್ಥಾನಮಾನವನ್ನು ಘೋಷಿಸಿದ್ದರು.








