(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.01. ವೇಗವಾಗಿ ಬಂದ ವಾಹನವೊಂದನ್ನು ನಿಲ್ಲಿಸಲು ಸೂಚಿಸಿದರೂ ನಿಲ್ಲಿದೆ ಪರಾರಿಯಾಗುವ ಯತ್ನದಲ್ಲಿದ್ದಾಗ ಸಿನಿಮೀಯ ಶೈಲಿಯಲ್ಲಿ ಫೈರಿಂಗ್ ಮಾಡಿ ಮೂವರನ್ನು ಬಂಧಿಸಿದ ಘಟನೆ ಬಂಟ್ವಾಳದಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಬಂಧಿತ ಆರೋಪಿಗಳನ್ನು ಮಾರಿಪಳ್ಳ ನಿವಾಸಿ ಸದ್ದಾಂ, ಸುರತ್ಕಲ್ ನಿವಾಸಿ ಮೌಸೀನ್ ಹಾಗೂ ಬೊಳ್ಳಾಯಿ ನಿವಾಸಿ ಇರ್ಶಾದ್ ಎಂದು ಗುರುತಿಸಲಾಗಿದೆ. ಅಮ್ಮೆಮಾರ್ ನಿವಾಸಿಗಳಾದ ಮನ್ಸೂರ್ ಹಾಗೂ ಅಮ್ಮಿ ಪರಾರಿಯಾಗಿದ್ದಾರೆ. ಬೆಳ್ತಂಗಡಿ ಕಡೆಯಿಂದ ವೇಗವಾಗಿ ಬಂದ ಉಡುಪಿ ನೋಂದಣಿಯ ಸ್ವಿಫ್ಟ್ ಕಾರನ್ನು ಬೆಳ್ತಂಗಡಿ ಚೆಕ್ ಪೋಸ್ಟ್ ನಲ್ಲಿ ಪೋಲೀಸರು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸದೆ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು ಬಂದಿದ್ದು, ಆ ಬಳಿಕ ಪುಂಜಾಲಕಟ್ಟೆಯಲ್ಲೂ ಪೊಲೀಸರು ವಾಹನ ನಿಲ್ಲಿಸಲು ಸೂಚನೆ ನೀಡಿದಾಗ ಇಲ್ಲೂ ನಿಲ್ಲಿಸದೆ ಬಂದಿದ್ದಾರೆ ಎನ್ನಲಾಗಿದೆ. ಬೆಳ್ತಂಗಡಿ ಪೊಲೀಸರ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಪೊಲೀಸರು ಮಣಿಹಳ್ಳ ಜಂಕ್ಷನ್ ನಲ್ಲಿ ಕಾರನ್ನು ನಿಲ್ಲಿಸಲು ಸೂಚಿಸಿದ್ದು, ಆರೋಪಿಗಳು ಪೊಲೀಸರ ಮೇಲೆಯೇ ಕಾರನ್ನು ಹಾಯಿಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕಾರಿನ ಮೇಲೆ ಫೈರಿಂಗ್ ಮಾಡಿ ಐವರು ಆರೋಪಿಗಳ ಪೈಕಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಇಬ್ಬರು ಆರೋಪಿಗಳು ಕತ್ತಲೆಯಲ್ಲಿ ಪರಾರಿಯಾಗಿದ್ದಾರೆ.
ಜಿಲ್ಲಾ ಎಸ್ಪಿ ಡಾ. ಬಿ.ಆರ್.ರವಿಕಾಂತೇಗೌಡ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಅಕ್ಷಯ್ ರವರ ನೇತ್ರತ್ವದಲ್ಲಿ ಬಂಟ್ವಾಳ ನಗರ ಠಾಣಾ ಉಪ ನಿರೀಕ್ಷಕ ಚಂದ್ರಶೇಖರ್ ಮತ್ತು ಗ್ರಾಮಾಂತರ ಠಾಣಾ ಉಪ ನಿರೀಕ್ಷಕ ಪ್ರಸನ್ನ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಾರಿನಲ್ಲಿ ಮಾರಕಾಯುಧಗಳು ದೊರೆತಿದ್ದು, ದರೋಡೆ ನಡೆಸಲು ತೆರಳುತ್ತಿದ್ದಿರಬಹುದೆಂದು ಸಂಶಯಿಸಲಾಗಿದ್ದು, ಪೋಲೀಸರ ಉನ್ನತ ತನಿಖೆಯಿಂದ ನಿಜ ಘಟನೆ ಬೆಳಕಿಗೆ ಬರಲಿದೆ.