ಕಡಬದಲ್ಲೊಂದು ಸ್ವಾರಸ್ಯಕರ ಘಟನೆ ಪ್ರೇಮಿಗಳ ಜಗಳಕ್ಕೆ ಚರಂಡಿ ಸೇರಿದ ಕೀ- ನಾಲ್ಕು ಗಂಟೆ ಹುಡುಕಾಟ



(ನ್ಯೂಸ್ ಕಡಬ) newskadaba.com ಜು. 25. ಸಣ್ಣ ವಿಷಯಕ್ಕೆ ಆರಂಭವಾದ ಮಾತಿನ ಚಕಮಕಿಯೊಂದು ಕಾರಿನ ಕೀ ಚರಂಡಿಗೆ ಸೇರುವಂತೆ ಮಾಡಿದ್ದು, ಬಳಿಕ ಕೀಗಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಹುಡುಕಾಟ ನಡೆಸಿದ ಸ್ವಾರಸ್ಯಕರ ಘಟನೆ ಶುಕ್ರವಾರ ಕಡಬ ಸಂತೆಕಟ್ಟೆ ಬಳಿ ನಡೆದಿದೆ.







 

ಮಾಹಿತಿಯ ಪ್ರಕಾರ, ಈಶ್ವರಮಂಗಲ ಮೂಲದ ಯುವಕನೊಬ್ಬ ಸ್ನೇಹಿತನ ಕಾರಿನಲ್ಲಿ ಕಡಬಕ್ಕೆ ಆಗಮಿಸಿದ್ದು, ಜನ್ಮದಿನದ ಶುಭಾಶಯ ತಿಳಿಸಲು ಸಂತೆಕಟ್ಟೆ ಸಮೀಪದ ಖಾಸಗಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪರಿಚಯದ ಯುವತಿಯನ್ನು ಭೇಟಿ ಮಾಡಿದ್ದಾನೆ ಎನ್ನಲಾಗಿದೆ. ಕಚೇರಿ ಕಟ್ಟಡದ ಮೊದಲ ಮಹಡಿಯಲ್ಲಿದ್ದ ವೇಳೆ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ.






 

ವಾಗ್ವಾದ ತಾರಕಕ್ಕೇರಿದ ಸಂದರ್ಭದಲ್ಲಿ ಕೋಪಗೊಂಡ ಯುವತಿ, ಮೊದಲ ಮಹಡಿಯಿಂದಲೇ ಯುವಕನ ಕೈಯಲ್ಲಿದ್ದ ಕಾರಿನ ಕೀಯನ್ನು ಕಸಿದು ಕೆಳಗಿದ್ದ ಚರಂಡಿಗೆ ಎಸೆದಿದ್ದಾರೆ ಎನ್ನಲಾಗಿದೆ. ಕೀ ಕೊಳಚೆ ನೀರು ಹಾಗೂ ಹೂಳಿನಲ್ಲಿ ಬಿದ್ದು ಕಾಣೆಯಾಗಿದ್ದು, ಕಾರನ್ನು ತೆರೆಯಲು ಸಾಧ್ಯವಾಗದೆ ಯುವಕ ಸ್ಥಳೀಯರ ನೆರವಿನೊಂದಿಗೆ ಹುಡುಕಾಟ ಆರಂಭಿಸಿದ್ದಾನೆ. ಚರಂಡಿ ಬದಿಯ ಗಿಡಗಂಟಿಗಳನ್ನು ತೆರವುಗೊಳಿಸಿ ಶೋಧ ನಡೆಸಿದರೂ ಕೀ ಪತ್ತೆಯಾಗಿಲ್ಲ.

 

ಜನನಿಬಿಡ ಪ್ರದೇಶವಾದ ಸಂತೆಕಟ್ಟೆಯಲ್ಲಿ ಚರಂಡಿಯೊಳಗೆ ಕೀ ಹುಡುಕುತ್ತಿರುವ ದೃಶ್ಯ ಕಂಡು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸುಮಾರು ನಾಲ್ಕು ಗಂಟೆಗಳ ಕಾಲ ಹುಡುಕಾಟ ನಡೆಸಿದರೂ ಕೀ ಸಿಗದ ಕಾರಣ ಯುವಕ ಕಾರನ್ನು ಅಲ್ಲೇ ಬಿಟ್ಟು ಸಂಜೆ ವೇಳೆ ಮನೆಗೆ ತೆರಳಿದ್ದಾನೆ ಎಂದು ತಿಳಿದುಬಂದಿದೆ. ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ನಡುವೆ ಈ ಸ್ವಾರಸ್ಯಕರ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ

error: Content is protected !!
Scroll to Top