(ನ್ಯೂಸ್ ಕಡಬ) newskadaba.com, ಜು.20 : ಸಂಪಾಜೆ ಕಡೆಪಾಲದಲ್ಲಿ 22 ವರ್ಷದ ವಿವಾಹಿತ ಮಹಿಳೆ ಫಾತಿಮತ್ ನಿಶಾನ ಜುಲೈ 18ರಂದು ರಾತ್ರಿ ತೀವ್ರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
4 ವರ್ಷಗಳ ಹಿಂದೆ ಕಡೆಪಾಲದ ಅನ್ಸಾರ್ ಅವರೊಂದಿಗೆ ಮದುವೆಯಾಗಿದ್ದ ನಿಶಾನ ಅವರಿಗೆ 2.5 ವರ್ಷದ ಮಗುವಿದೆ. ಘಟನೆಯ ರಾತ್ರಿ ನಿಶಾನ ಅವರು ತಮ್ಮ ತಾಯಿ ಜುಬೈದಾ ಅವರಿಗೆ ಕರೆ ಮಾಡಿ ಗಂಡನ ಮನೆಯವರಿಂದ ಕಿರುಕುಳವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ತಕ್ಷಣ ತಾಯಿ ಮಗಳ ಮನೆಗೆ ಧಾವಿಸಿದಾಗ ನಿಶಾನ ಮೃತದೇಹ ಪತ್ತೆಯಾಗಿದೆ.
ನಿಶಾನ ಸ್ನಾನಗೃಹದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಂಡನ ಮನೆಯವರು ಹೇಳುತ್ತಿದ್ದರೆ, ತಾಯಿ ಬರುವಷ್ಟರಲ್ಲೇ ತರಾತುರಿಯಲ್ಲಿ ಮೃತದೇಹವನ್ನು ಹೊರಗೆ ಮಲಗಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ವ್ಯವಸ್ಥಿತ ಕೊಲೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದು, ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.









