ಸರ್ಕಾರಿ ಹುದ್ದೆಗಾಗಿ ತಂದೆಯ ಪ್ರಭಾವ ಬಳಸಿ ನಕಲಿ ದಾಖಲೆ ಸಲ್ಲಿಕೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರ ಪುತ್ರಿ ವಿರುದ್ಧ FIR, ನೋಟಿಸ್‌

(ನ್ಯೂಸ್ಕಡಬ) newskadaba.com,   ಜು.14 : ಶಿವಶಂಕರಪ್ಪ ಸಾಹುಕಾರ್ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷ ಹುದ್ದೆಯಿಂದ ಅಮಾನತುಗೊಳಿಸಿದ ಬೆನ್ನಲ್ಲೇ ಇದೀಗ ಅವರ ಪುತ್ರಿಗೆ ನೋಟಿಸ್ ನೀಡಲಾಗಿದೆ.

ಕೆಪಿಎಸ್‌ಸಿ ಸಹಾಯಕ ಕಾರ್ಯದರ್ಶಿ ಅವರು ವಿಧಾನಸೌಧ ಪೊಲೀಸರಿಗೆ ದೂರು ನೀಡಿದ್ದು, ಸರ್ಕಾರಿ ಹುದ್ದೆಗಾಗಿ ತಂದೆಯ ಪ್ರಭಾವ ಬಳಸಿ ನೇಮಕಾತಿ ವೇಳೆ ಸುಳ್ಳು ಆದಾಯ ಮತ್ತು ಜಾತಿ ಪ್ರಮಾಣ ಸಲ್ಲಿಸಿದ್ದಾರೆಂದು ಆರೋಪಿಸಿದ್ದರು. ಅದರನ್ವಯ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಅದರನ್ವಯ ಇದೀಗ ಪೊಲೀಸರು ಶಿವಶಂಕರಪ್ಪ ಸಾಹುಕಾರ್ ಪುತ್ರಿ ಸುಮಾ ಸಾಹುಕಾರ್ ಅವರಿಗೆ ನೋಟಿಸ್ ನೀಡಿದ್ದಾರೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಸುಮಾ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದರು. ಹಿಂದುಳಿದ ವರ್ಗಗಳ ಮೀಸಲಾತಿ ಅಥವಾ ಶುಲ್ಕ ವಿನಾಯಿತಿ ಪಡೆಯುವ ದುರುದ್ದೇಶದಿಂದ ಅವರು ತಮ್ಮ ವಾರ್ಷಿಕ ಆದಾಯ ಕೇವಲ 40,000 ರೂ. ಎಂದು ನಮೂದಾಗಿದ್ದ ಆದಾಯ ಪ್ರಮಾಣಪತ್ರವನ್ನು ಸಲ್ಲಿಸಿದ್ದರು.

Scroll to Top