(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಮೇ.26. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯದ ಘಟಕವು ನೆಲ್ಯಾಡಿಯಲ್ಲಿ ಆರಂಭಗೊಳ್ಳಲಿದ್ದು, ಆ ಪ್ರಯುಕ್ತ ಶುಕ್ರವಾರದಂದು ಸಂತಜಾರ್ಜ್ ವಿದ್ಯಾಸಂಸ್ಥೆ ಆವರಣದಲ್ಲಿ ಕಾಲೇಜಿನ ಕಚೇರಿ ಉದ್ಘಾಟಿಸಿ ದಾಖಲಾತಿಗೆ ಚಾಲನೆ ನೀಡಲಾಯಿತು.
ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ವಿ.ವಿ.ಉಪಕುಲಪತಿ ಪ್ರೊ.ಭೈರಪ್ಪ, ಮಂಗಳೂರು ವಿಶ್ವವಿದ್ಯಾನಿಲಯವು ದೇಶದಲ್ಲಿಯೇ 31ನೇ ಸ್ಥಾನವನ್ನು ಪಡೆದುಕೊಂಡಿದೆ. ರಾಜ್ಯ ಸರಕಾರದ ನೆರವಿನೊಂದಿಗೆ ಉಡುಪಿಯಲ್ಲಿ 141 ಕೋಟಿ ರೂ.ವೆಚ್ಚದಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರವು ಆರಂಭಗೊಳ್ಳಲಿದ್ದು ಇದು ರಾಷ್ಟ್ರದಲ್ಲೇ ಪ್ರಪ್ರಥಮ ಪ್ರಯತ್ನವಾಗಿದೆ. ನೆಲ್ಯಾಡಿಯಲ್ಲಿ ಕಾಲೇಜು ಆರಂಭಿಸಲು ತೊಟ್ಟಿಲಗುಂಡಿಯಲ್ಲಿ 27 ಎಕ್ರೆ ಸರಕಾರಿ ಜಾಗ ಮಂಜೂರುಗೊಂಡಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಘಟಕ ಕಾಲೇಜು ನೆಲ್ಯಾಡಿಯ ಸೈಂಟ್ ಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಆರಂಭಗೊಳ್ಳಲಿದ್ದು, ಬಿ.ಎ., ಬಿ.ಕಾಂ., ಹಾಗೂ ಬಿ.ಬಿ.ಎ.,ತರಗತಿಗಳಿಗೆ ಪ್ರವೇಶಾತಿ ನಡೆಯಲಿದೆ ಎಂದರು. ಮಂಗಳೂರು ವಿ.ವಿ.ನೆಲ್ಯಾಡಿ ಘಟಕ ಕಾಲೇಜಿನ ಪ್ರಾಂಶುಪಾಲ ಡಾ. ಯತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಕಾಲೇಜು ಅನುಷ್ಠಾನ ಸಮಿತಿ ಅಧ್ಯಕ್ಷೆ, ತಾ.ಪಂ.ಸದಸ್ಯೆ ಉಷಾ ಅಂಚನ್, ಮಂಗಳೂರು ವಿ.ವಿ.ಸಿಂಡಿಕೇಟ್ ಸದಸ್ಯ ವಿಜಯಕುಮಾರ್ ಸೊರಕೆ, ಗೌರವ ಸಲಹೆಗಾರ ರವೀಂದ್ರ ಟಿ. ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ಏಲಿಯಾಸ್, ಉಪನ್ಯಾಸಕ ವಿಶ್ವನಾಥ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಕೆ.ಪಿ.ತೋಮಸ್, ನೆಲ್ಯಾಡಿ ಗ್ರಾ.ಪಂ.ಪಿಡಿಒ ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.