(ನ್ಯೂಸ್ ಕಡಬ) newskadaba.com ಜು. 05. ಮಕ್ಕಳ ಹಾಸಿಗೆಯಲ್ಲೇ ನಾಗರಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಉತ್ತರ ತಾಲೂಕಿನ ಹೆಸರಘಟ್ಟ ಸಮೀಪದ ಗುಡ್ಡದಹಳ್ಳಿಯ ಮನೆಯೊಂದರಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೇ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವರದಿಯ ಪ್ರಕಾರ, ರಾತ್ರಿ ವೇಳೆ ಪೋಷಕರು ಮಕ್ಕಳೊಂದಿಗೆ ಮನೆಯಲ್ಲೇ ಮಲಗಿದ್ದ ಸಂದರ್ಭದಲ್ಲಿ ಸುಮಾರು 5 ಅಡಿ ಉದ್ದದ ನಾಗರಹಾವೊಂದು ಮಕ್ಕಳ ಹಾಸಿಗೆಯ ಬಳಿ ಅಡಗಿಕೊಂಡಿತ್ತು. ಹಾವನ್ನು ಗಮನಿಸಿದ ಪೋಷಕರು ಬೆಚ್ಚಿಬಿದ್ದು ತಕ್ಷಣ ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದ ಉರಗ ರಕ್ಷಕ ಮೊದಲು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಬಳಿಕ ನಾಗರಹಾವನ್ನು ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸೆರೆಹಿಡಿದರು.
ಸೆರೆಹಿಡಿದ ಹಾವನ್ನು ನಂತರ ಸೂಕ್ತ ಅರಣ್ಯ ಪ್ರದೇಶಕ್ಕೆ ಬಿಟ್ಟು ಸಂರಕ್ಷಿಸಲಾಗಿದೆ. ಹಾವಿನಿಂದ ಯಾರಿಗೂ ಯಾವುದೇ ಗಾಯ ಅಥವಾ ತೊಂದರೆ ಉಂಟಾಗಿಲ್ಲ ಎಂದು ತಿಳಿದುಬಂದಿದೆ.













