ದುರದೃಷ್ಟಕರ ಘಟನೆ ಮರದ ಮೇಲಿಂದ ಬಿದ್ದ ತೆಂಗಿನಕಾಯಿ ತಗುಲಿ ಒಂದೂವರೆ ವರ್ಷದ ಮಗು ಮೃತ್ಯು

(ನ್ಯೂಸ್ಕಡಬ) newskadaba.com, ಜೂ.11 : ತಾಯಿಯ ಕಂಕುಳಲ್ಲಿದ್ದ ಒಂದೂವರೆ ವರ್ಷದ ಗಂಡು ಮಗುವಿನ ತಲೆಗೆ ನೇರವಾಗಿ ತೆಂಗಿನಕಾಯಿ ಬಿದ್ದು ಮಗು ಮೃತಪಟ್ಟ ಅತ್ಯಂತ ದುರದೃಷ್ಟಕರ ಘಟನೆ ಬ್ರಹ್ಮಾವರದ ಹೆರಂಜೆಯಲ್ಲಿ ಸಂಭವಿಸಿದೆ.

ತಾಯಿಯು ತನ್ನ 6 ವರ್ಷದ ಹಿರಿಯ ಮಗಳನ್ನು ಶಾಲೆಗೆ ಬಿಡಲು ಕಿರಿಯ ಮಗುವನ್ನು ಎತ್ತಿಕೊಂಡು ಹೋಗುತ್ತಿದ್ದಾಗ, ದಾರಿ ಬದಿಯ ತೋಟದ 40 ಅಡಿ ಎತ್ತರದ ಮರದಿಂದ ಹಸಿ ತೆಂಗಿನಕಾಯಿಯೊಂದು ಅಚಾನಕ್ಕಾಗಿ ಮಗುವಿನ ತಲೆಗೆ ಬಿದ್ದಿದೆ. ಕಾಯಿ ಬಿದ್ದ ರಭಸಕ್ಕೆ ಮಗುವಿನ ತಲೆಗೆ ಗಂಭೀರ ಪೆಟ್ಟಾಗಿತ್ತು.

ಅವಘಡ ಸಂಭವಿಸುತ್ತಿದ್ದಂತೆ ಸ್ಥಳೀಯರು ಧಾವಿಸಿ, ಆಸ್ಪತ್ರೆಗೆ ಸಾಗಿಸುವ ದಾರಿಯುದ್ದಕ್ಕೂ ಮಗುವಿಗೆ ಸಿಪಿಆರ್ ನೀಡುತ್ತಾ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ತಲೆಗೆ ತೀವ್ರ ಗಾಯವಾಗಿದ್ದರಿಂದ ತುರ್ತು ಶಸ್ತ್ರಚಿಕಿತ್ಸೆ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಸಂಜೆಯ ವೇಳೆಗೆ ಕೊನೆಯುಸಿರೆಳೆದಿದೆ.

Scroll to Top