ಡಿಕೆಶಿ – ರಾಮಲಿಂಗಾರೆಡ್ಡಿ ಮಧ್ಯರಾತ್ರಿ ಸಂಧಾನ ಯಶಸ್ವಿ: ನಿಗೂಢವಾಗಿಯೇ ಉಳಿದ ರಾಜೀನಾಮೆ ನಿರ್ಧಾರ!



(ನ್ಯೂಸ್‌ ಕಡಬ) newskadaba.com ಜೂ. 06. ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ಕುರಿತ ಅಸಮಾಧಾನದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಅವರ ನಡೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ಇದೀಗ ಈ ಬೆಳವಣಿಗೆ ಹೊಸ ತಿರುವು ಪಡೆದುಕೊಂಡಿದ್ದು, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ರಾಮಲಿಂಗಾ ರೆಡ್ಡಿ ನಡುವೆ ನಡೆದ ಮಧ್ಯರಾತ್ರಿಯ ಸುದೀರ್ಘ ಸಂಧಾನ ಮಾತುಕತೆ ಕುತೂಹಲ ಹೆಚ್ಚಿಸಿದೆ.







ಶುಕ್ರವಾರ ರಾತ್ರಿ ಬೆಂಗಳೂರಿನ ಜಯನಗರದ ಖಾಸಗಿ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಸಚಿವ ರಾಮಲಿಂಗಾ ರೆಡ್ಡಿ ಸುಮಾರು ಎರಡೂವರೆ ಗಂಟೆಗಳ ಕಾಲ ಮುಖಾಮುಖಿ ಚರ್ಚೆ ನಡೆಸಿದರು. ರಾತ್ರಿ 11 ಗಂಟೆಗೆ ಆರಂಭವಾದ ಸಭೆ ಮುಂಜಾನೆ 1.30ರವರೆಗೆ ಮುಂದುವರಿದಿದ್ದು, ಪಕ್ಷದ ಹೈಕಮಾಂಡ್ ಸೂಚನೆಯ ಮೇರೆಗೆ ಈ ಸಂಧಾನ ಸಭೆ ನಡೆದಿರುವ ಮಾಹಿತಿ ಲಭ್ಯವಾಗಿದೆ.






2023ರಲ್ಲೇ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ತಮ್ಮ ನಿವಾಸಕ್ಕೆ ಭೇಟಿ ನೀಡಿ ಬೆಂಗಳೂರು ಅಭಿವೃದ್ಧಿ ಖಾತೆ ನೀಡುವ ಭರವಸೆ ನೀಡಿದ್ದರು ಎಂದು ರಾಮಲಿಂಗಾ ರೆಡ್ಡಿ ಬಹಿರಂಗವಾಗಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಎಂ ಡಿಕೆ ಶಿವಕುಮಾರ್, ‘ಭರವಸೆ ನೀಡಿರುವುದು ಸತ್ಯ. ಆದರೆ ಖಾತೆ ಬದಲಾವಣೆ ಕುರಿತ ಅಂತಿಮ ನಿರ್ಧಾರ ಹೈಕಮಾಂಡ್ ಕೈಯಲ್ಲಿದೆ’ ಎಂದು ಸ್ಪಷ್ಟಪಡಿಸಿದ್ದರು.

ಮಧ್ಯರಾತ್ರಿ ಮಾತುಕತೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್, “ಯಾವುದೇ ಆತಂಕ ಬೇಡ. ನಾವೆಲ್ಲಾ ಹಳೆಯ ಸ್ನೇಹಿತರು. ಕೂತು ಮಾತನಾಡಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದೇವೆ” ಎಂದು ತಿಳಿಸಿದರು. ರಾಮಲಿಂಗಾ ರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಸಿಎಂ, ಎಲ್ಲವನ್ನೂ ಈಗ ಹೇಳಬೇಕಾಗಿಲ್ಲ ಎಂದು ಪ್ರತಿಕ್ರಿಯಿಸಿದರು. ಇದೇ ವೇಳೆ ರಾಮಲಿಂಗಾ ರೆಡ್ಡಿ ಕೂಡ, ಮುಖ್ಯಮಂತ್ರಿಗಳು ಹೇಳಿದ್ದನ್ನೇ ನಾನು ಹೇಳುತ್ತೇನೆ. ಎಲ್ಲಾ ಗೊಂದಲಗಳು ನಿವಾರಣೆಯಾಗಿವೆ ಎಂದು ಹೇಳಿ ಹೆಚ್ಚಿನ ಮಾಹಿತಿ ನೀಡದೆ ಸ್ಥಳದಿಂದ ತೆರಳಿದರು.

 

error: Content is protected !!
Scroll to Top