(ನ್ಯೂಸ್ ಕಡಬ) newskadaba.com, ಜೂ.05: ಬುಧವಾರ (ಜೂನ್ 3) ಡಿಕೆ ಶಿವಕುಮಾರ್ ನೇತೃತ್ವದ ನೂತನ ಸರ್ಕಾರ ಅಧಿಕಾರಕ್ಕೆ ಬಂತು, ಒಂದು ದಿನದ ನಂತರ ಖಾತೆ ಹಂಚಿಕೆಯಾಯಿತು. ಇದಾದ ಮರುದಿನವೇ, ಒಬ್ಬರು ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದರು. ಈಗ, ಇವರ ಹಿಂದೆಯೇ, ಇನ್ನೊಬ್ಬರು ಸಚಿವರು, ಬಹಿರಂಗವಾಗಿ ಅಸಮಾಧಾವನ್ನು ಹೊರಹಾಕಿದ್ದಾರೆ…
ಬೆಂಗಳೂರು ಅಭಿವೃದ್ದಿ ಬಯಸಿದ್ದ ರಾಮಲಿಂಗಾ ರೆಡ್ಡಿಗೆ ಸಂಪದ್ಭರಿತ ಜಲಸಂಪನ್ಮೂಲ ಖಾತೆಯನ್ನು ನೀಡಲಾಗಿತ್ತು. ಕೃಷ್ಣ ಬೈರೇಗೌಡರಿಗೆ, ಬೆಂಗಳೂರು ಅಭಿವೃದ್ದಿ ನೀಡಲಾಗಿತ್ತು. ಇದಕ್ಕೆ ಬೇಸರ ವ್ಯಕ್ತ ಪಡಿಸಿ ರಾಮಲಿಂಗಾ ರೆಡ್ಡಿ ರಾಜೀನಾಮೆಯನ್ನು ನೀಡಿದ್ದಾರೆ. ಇವರ ಬೆನ್ನಲ್ಲೇ, ಆಹಾರ ಖಾತೆಯ ಜವಾಬ್ದಾರಿ ಪಡೆದುಕೊಂಡಿರುವ ಕೆಎಚ್ ಮುನಿಯಪ್ಪ, ಬಹಿರಂಗ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.
ದೇವನಹಳ್ಳಿಯಿಂದ ಸ್ಪರ್ಧಿಸಿ ಗೆದ್ದಿದ್ದ ಕೆಎಚ್ ಮುನಿಯಪ್ಪ
2019ರ ಲೋಕಸಭಾ ಚುನಾವಣೆಯಲ್ಲಿ, ಕೋಲಾರ ಕ್ಷೇತ್ರದಲ್ಲಿ ಕೆಎಚ್ ಮುನಿಯಪ್ಪ ಸೋಲು ಅನುಭವಿಸಿದ್ದರು. ಇದಾದ ನಂತರ, ರಾಜ್ಯ ರಾಜಕಾರಣಕ್ಕೆ ಆಗಮಿಸಿದ ಇವರು ದೇವನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ಕಳೆದ ಸಿದ್ದರಾಮಯ್ಯನವರ ಸರ್ಕಾರದಲ್ಲೂ ಮುನಿಯಪ್ಪಗೆ ಆಹಾರ ಖಾತೆಯನ್ನು ಕೊಡಲಾಗಿತ್ತು. ಈಗ, ಡಿಕೆ ಶಿವಕುಮಾರ್ ಸರ್ಕಾರದಲ್ಲೂ ಅದೇ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯನ್ನು ನೀಡಲಾಗಿದೆ. ಇದಕ್ಕೆ ಮುನಿಯಪ್ಪ ಅಸಮಾಧಾನವನ್ನು ವ್ಯಕ್ತ ಪಡಿಸಿ, ನನ್ನ ಹಿರಿತನವನ್ನು ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಮುನಿಯಪ್ಪ ಅಸಮಾಧಾನ, ಕಾಂಗ್ರೆಸ್ಸಿಗೆ ಮತ್ತೊಂದು ಶಾಕ್
ಗುರುವಾರ (ಜೂನ್ 4) ನಡೆದ ಸಭೆಯಲ್ಲಿ ತಾವು ಬಯಸಿದ್ದ ಖಾತೆ ಸಿಗದ ಹಿನ್ನಲೆಯಲ್ಲಿ, ಸಭೆಯಿಂದಲೇ ರಾಮಲಿಂಗಾ ರೆಡ್ಡಿ ನಿರ್ಗಮಿಸಿದ್ದರು. ಶುಕ್ರವಾರ ತಮ್ಮ ಸ್ಥಾನಕ್ಕೆ ಒತ್ತಡದ ನಡುವೆಯೂ ರಾಜೀನಾಮೆಯನ್ನು ನೀಡಿದ್ದಾರೆ. ಅಧಿಕಾರಕ್ಕೆ ಬಂದ ಮೂರೇ ದಿನದಲ್ಲಿ ಆದ ಈ ವಿದ್ಯಮಾನ, ರಾಜ್ಯ ಕಾಂಗ್ರೆಸ್ಸಿಗೆ ಶಾಕ್ ನೀಡಿತ್ತು. ಈಗ, ಕೆಎಚ್ ಮುನಿಯಪ್ಪ ಅಸಮಾಧಾನ , ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.









