(ನ್ಯೂಸ್ ಕಡಬ) newskadaba.com, ಜೂ.04: ಜಿಲ್ಲೆಯಲ್ಲಿ ಜೂನ್ 28 ರಿಂದ ಜುಲೈ 01 ರವರೆಗೆ ರಾಷ್ಟ್ರೀಯ ಪಲ್ಸ್ ಪೊಲಿಯೋ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಪೋಷಕರು ತಮ 0-5 ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಪೊಲಿಯೋ ಬೂತ್ಗಳಿಗೆ ಕರೆದುಕೊಂಡು ಬಂದು ಉಚಿತ ಪೊಲಿಯೋ ಲಸಿಕೆಯನ್ನು ತಪ್ಪದೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ.ಎನ್.ಅನುರಾಧ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
5 ವರ್ಷದೊಳಗಿನ ಯಾವುದೇ ಮಕ್ಕಳು ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗದಂತೆ ಎಲ್ಲಾ ಮಕ್ಕಳಿಗೂ ತಪ್ಪದೇ ಲಸಿಕೆ ಹಾಕಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು. ಆಶಾ, ಅಂಗನವಾಡಿ ಆರೋಗ್ಯಧಿಕಾರಿಗಳು ಪಲ್ಸ್ ಪೋಲಿಯೋ ಲಸಿಕೆ ಬಗ್ಗೆ ಅರಿವು ಮೂಡಿಸಿ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಪೋಲಿಯೋ ಲಸಿಕೆ ಅಭಿಯಾನದ ಕುರಿತು ಧ್ವನಿವರ್ಧಕ ಮೂಲಕ ವ್ಯಾಪಕ ಜಾಗೃತಿ ಮೂಡಿಸಬೇಕು. ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ವಿದ್ಯಾರ್ಥಿಗಳ ಸಹಕಾರ ಪಡೆದುಕೊಳ್ಳಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ತಾಲ್ಲೂಕು ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಮ ಕ್ಲಿನಿಕ್ಗಳಲ್ಲಿ ಹಾಗೂ ಆಯ್ದ ಶಾಲಾ, ಅಂಗನವಾಡಿ ಕೇಂದ್ರಗಳು, ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆ, ರಸ್ತೆ ಟೋಲ್ ಗೇಟ್ಗಳಲ್ಲಿ ಪೊಲಿಯೋ ಬೂತ್ಗಳನ್ನು ತೆರೆಯಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಗರ್ಭಿಣಿ, ಬಾಣಂತಿಯರಿಗೆ ಗರ್ಭಾವಸ್ಥೆಯಿಂದ ಹೆರಿಗೆ ಆಗುವ ವರೆಗೂ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಹಾಗೂ ಸೂಕ್ತ ಲಸಿಕೆಗಳು ತಪ್ಪದೇ ನೀಡಬೇಕು. ಹೆರಿಗೆ ನಂತರದಲ್ಲಿ ತಾಯಿ ಮಗುವಿಗೆ ಒಳ್ಳೆಯ ಆರೈಕೆ ಸಿಗುವಂತಾಗಬೇಕು.
ಜಿಲ್ಲೆಯಲ್ಲಿ ಹೆರಿಗೆ ಸಮಯದಲ್ಲಿ ಯಾವುದೇ ಬಾಣಂತಿಯರು ಹಾಗೂ ಶಿಶು ಮರಣ ಸಂಭವಿಸದಂತೆ ಅಗತ್ಯ ವೈದ್ಯಕೀಯ ಸೇವೆ ಸಿಗಬೇಕು. ಹೆರಿಗೆಗೆ ಬರುವ ಗರ್ಭಿಣಿಯರಿಗೆ ಸುಖಾಸುಮ್ಮನೆ ಬೇರೆ ಆಸ್ಪತ್ರೆಗೆ ಕಳುಹಿಸಿದರೆ ಸಂಬಂಧಪಟ್ಟ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದರು.









