(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 03. ಇಂದು ಅದ್ದೂರಿಯಾಗಿ ನಡೆಯಬೇಕಿದ್ದ ಮಂಗಳೂರು-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಆರಂಭಕ್ಕೆ ತಾತ್ಕಾಲಿಕ ಹಿನ್ನಡೆಯಾಗಿದ್ದು, ಈ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರವನ್ನು ನೈಋತ್ಯ ರೈಲ್ವೇ ವಲಯವು ಕೊನೆ ಗಳಿಗೆಯಲ್ಲಿ ರದ್ದುಗೊಳಿಸಿದೆ.
ಕಳೆದ ವಾರವಷ್ಟೇ ರೈಲ್ವೇ ಹಿರಿಯ ಅಧಿಕಾರಿಗಳು ವಂದೇ ಭಾರತ್ ರೈಲು ಸಂಚಾರದ ಕುರಿತು ಅಧಿಕೃತ ಪ್ರಸ್ತಾವನೆ ಸಿದ್ಧಪಡಿಸಿರುವ ಮಾಹಿತಿ ಹೊರಬಿದ್ದಿತ್ತು. ಈ ಪ್ರಾಯೋಗಿಕ ಓಡಾಟದ ಸುದ್ದಿ ಕೇಳಿ ಕರಾವಳಿ ಪ್ರಯಾಣಿಕರು ಸಂತಸಗೊಂಡಿದ್ದರು. ಆದರೆ, ಈಗ ದಿಢೀರನೆ ಸಂಚಾರ ಸ್ಥಗಿತಗೊಂಡಿರುವುದು ನಿರಾಸೆ ಮೂಡಿಸಿದೆ.
ರೈಲ್ವೇ ಇಲಾಖೆಯು ಈ ಪ್ರಾಯೋಗಿಕ ಸಂಚಾರದ ರದ್ದತಿಗೆ ಯಾವುದೇ ಅಧಿಕೃತ ಕಾರಣವನ್ನು ಬಹಿರಂಗಪಡಿಸಿಲ್ಲವಾದರೂ, ಮೂಲಗಳ ಪ್ರಕಾರ ಪ್ರಮುಖ ಎರಡು ತಾಂತ್ರಿಕ ಕಾರಣಗಳು ಎನ್ನಲಾಗುತ್ತಿದೆ. ಸುರಕ್ಷತಾ ಮೌಲ್ಯಮಾಪನಗಳು ಮುಗಿದ ನಂತರ ಭಾರತೀಯ ರೈಲ್ವೆಯು ಹೊಸ ಪರಿಷ್ಕೃತ ಪ್ರಾಯೋಗಿಕ ದಿನಾಂಕವನ್ನು ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.
AEB (ಅಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್) ಕೊರತೆ: ಪಶ್ಚಿಮ ಘಟ್ಟಗಳ ಕಠಿಣ ಭೂಪ್ರದೇಶ ಹಾಗೂ ಇಳಿಜಾರು ಪ್ರದೇಶಗಳಲ್ಲಿ ರೈಲು ಸುರಕ್ಷಿತವಾಗಿ ಚಲಿಸಲು ‘ಸ್ವಯಂಚಾಲಿತ ತುರ್ತು ಬ್ರೇಕಿಂಗ್ ವ್ಯವಸ್ಥೆ’ (AEB) ಅತ್ಯಂತ ಕಡ್ಡಾಯವಾಗಿದೆ. ಪ್ರಸ್ತುತ ನಿಯೋಜಿಸಲಾಗಿದ್ದ ವಂದೇ ಭಾರತ್ ರೈಲಿನ ರೇಕ್‌ನಲ್ಲಿ ಈ ಅತ್ಯಾಧುನಿಕ ಬ್ರೇಕಿಂಗ್ ಸಿಸ್ಟಮ್ ಇಲ್ಲದೇ ಇರುವುದೇ ಈ ರದ್ದತಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.









