(ನ್ಯೂಸ್ ಕಡಬ) newskadaba.com ಕಡಬ, ಜು.10. ಇಲ್ಲಿಗೆ ಸಮೀಪದ ಮರ್ಧಾಳ ಪಾಲೆತ್ತಡ್ಕ ನಿವಾಸಿ ಅಬೂಬಕ್ಕರ್ ಸಿದ್ದೀಕ್ ಎಂಬವರ ಪತ್ನಿ ಸಮೀರಾ (24) ಎಂಬವರು ಅಲ್ಪಕಾಲದ ಅನಾರೋಗ್ಯದಿಂದ ಬಹರೈನಿನ ಸಲ್ಮಾನಿಯ ಆಸ್ಪತ್ರೆಯಲ್ಲಿ ಸೋಮವಾರದಂದು ಮೃತಪಟ್ಟಿದ್ದಾರೆ.
ವರ್ಷದ ಹಿಂದೆ ಮದುವೆಯಾಗಿ ತನ್ನ ಗಂಡನೊಂದಿಗೆ ಬಹ್ರೇನ್ ಗೆ ತೆರಳಿದ್ದ ಸೆಮೀರಾ, ಜಾಂಡೀಸ್ ಕಾಯಿಲೆಗೆ ತುತ್ತಾಗಿ ಸುಮಾರು ದಿನಗಳ ಹಿಂದೆ ಭಾರತಕ್ಕೆ ಮರಳುವ ಉದ್ದೇಶದಿಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರೆನ್ನಲಾಗಿದೆ. ವಿಮಾನಕ್ಕೆ ಹತ್ತಲು 5 ನಿಮಿಷಗಳು ಬಾಕಿ ಇರುವಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರಿಂದಾಗಿ ತಕ್ಷಣವೇ ಬಹ್ರೇನ್ನ ಸಲ್ಮಾನಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರದಂದು ಮೃತಪಟ್ಟರು. ಮೃತದೇಹವನ್ನು ನಾಳೆ ಊರಿಗೆ ತರುವ ಬಗ್ಗೆ ಪ್ರಯತ್ನ ಮಾಡಲಾಗುತ್ತಿದೆಯೆಂದು ಕುಟುಂಬದ ಮೂಲಗಳು ತಿಳಿಸಿವೆ.