(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.20. ರಾಜ್ಯದಲ್ಲಿ ಚುನಾವಣೆ ನಡೆದೂ ಆಯಿತು. ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅತ್ಯಲ್ಪ ಅವಧಿಯಲ್ಲೇ ರಾಜೀನಾಮೆ ನೀಡಿಯೂ ಆಯಿತು. ಇನ್ನೇನಿದ್ದರೂ ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ನ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಬಾಕಿ ಇರುವುದು ಮಾತ್ರ.
ಸೋಮವಾರದಂದು ಹೆಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸುತ್ತಾರೆಂದು ಹೇಳಲಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಸಮಾರಂಭವನ್ನು ಮುಂದೂಡಲಾಗಿದ್ದು, ಬುಧವಾರದಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. ಸೋಮವಾರದಂದು ರಾಜೀವ್ ಗಾಂಧಿ ಪುಣ್ಯತಿಥಿಯಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸಹಿತ ಪ್ರಮುಖ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸಾಧ್ಯದ ಬಗ್ಗೆ ಕುಮಾರಸ್ವಾಮಿ ಹಾಗು ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದ್ದು, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ಮುಂದೂಡಿ ಬುಧವಾರದಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ ಎನ್ನಲಾಗಿದೆ. ಅವರ ಜೊತೆಗೆ ಉಪ ಮುಖ್ಯಮಂತ್ರಿಯಾಗಿ ಡಾ.ಜಿ. ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.