(ನ್ಯೂಸ್ ಕಡಬ) newskadaba.com, ಜೂ.03: ರಾಜ್ಯದ ನೂತನ ಮುಖ್ಯಮಂತ್ರಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ವಿಧಾನಸಭೆ ಸ್ಪೀಕರ್ ಮತ್ತು ವಿಧಾನ ಪರಿಷತ್ತಿನ ಸಭಾಪತಿ ಸ್ಥಾನಗಳ ಬದಲಾವಣೆ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಡಿಕೆ ಶಿವಕುಮಾರ್ ಸಂಪುಟದಲ್ಲಿ ಸ್ಪೀಕರ್ ಯುಟಿ ಖಾದರ್ ಸಚಿವರಾಗುವ ಸಾಧ್ಯತೆಯಿದೆ.
ಜೂನ್ 18 ರ ಪರಿಷತ್ ಚುನಾವಣೆಯ ನಂತರ ಮೇಲ್ಮನೆಯಲ್ಲಿ ಪಕ್ಷಕ್ಕೆ ಬಹುಮತ ದೊರೆಯುವುದರಿಂದ ಕಾಂಗ್ರೆಸ್ ಪಕ್ಷದವರೇ ಸಭಾಪತಿ ಆಗಬಹುದು ಎನ್ನಲಾಗುತ್ತಿದೆ.
2023 ರಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಖಾದರ್ ಅವರನ್ನು ಸಭಾಪತಿಯನ್ನಾಗಿ ಮಾಡಲಾಗಿತ್ತು. ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಂಪುಟ ಸ್ಥಾನ ದೊರೆಯುವ ಭರವಸೆ ನೀಡಲಾಗಿತ್ತು ಎನ್ನಲಾಗಿದೆ. ಆದರೆ 2023 ರಿಂದ ಸಚಿವ ಸಂಪುಟ ಪುನರ್ ರಚನೆಯಾಗಿರಲಿಲ್ಲ.
ಸಿದ್ದರಾಮಯ್ಯ ರಾಜೀನಾಮೆ ನೀಡಿ, ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಸಜ್ಜಾಗಿರುವುದರಿಂದ, ಹೊಸ ಸಚಿವ ಸಂಪುಟ ರಚನೆಯಾಗಲಿದೆ. ಖಾದರ್ ಸಚಿವರಾಗುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. “ವಿಧಾನಸಭೆಯ ಬಜೆಟ್ ಅಧಿವೇಶನದಿಂದಲೂ ಖಾದರ್ ಸಂಪುಟಕ್ಕೆ ಸೇರಲು ಸಿದ್ಧತೆ ನಡೆಸುತ್ತಿದ್ದರು. ಅವರು ತಮ್ಮ ಅವಧಿಯ ಮಧ್ಯದಲ್ಲಿ ಶಾಸಕರೊಂದಿಗೆ ಫೋಟೋ ಸೆಷನ್ ಕೂಡ ನಡೆಸಿದ್ದರು. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದು” ಎಂದು ಮೂಲಗಳು ತಿಳಿಸಿವೆ.













