(ನ್ಯೂಸ್ ಕಡಬ) newskadaba.com, ಮೇ.31: ರಾಜ್ಯದ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲೊಂದಾದ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮಾನವೀಯ ಮೌಲ್ಯಗಳನ್ನು ಪ್ರಶ್ನಿಸುವಂತಹ ಗಂಭೀರ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ಶವಾಗಾರದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬ ಮೃತ ಮಹಿಳೆಯರ ಶವಗಳ ಬೆತ್ತಲೆ ಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಸಂಗ್ರಹಿಸಿಕೊಂಡಿದ್ದಾನೆ ಎಂಬ ಆರೋಪ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ಶವಾಗಾರದ ಅಟೆಂಡರ್ ಆಗಿರುವ ಮುನೀರ್ ಅಹ್ಮದ್ ಎಂಬಾತ, ಮರಣೋತ್ತರ ಪರೀಕ್ಷೆ (ಪೋಸ್ಟ್‌ಮಾರ್ಟಂ) ವೇಳೆ ಅನುಮತಿ ಇಲ್ಲದೆ ತನ್ನ ಮೊಬೈಲ್ ಫೋನ್‌ನಲ್ಲಿ ಮೃತ ಮಹಿಳೆಯರ ಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಕೆಲ ಸಂದರ್ಭಗಳಲ್ಲಿ ಶವಗಳ ಮೇಲಿದ್ದ ಬಟ್ಟೆಗಳನ್ನು ತೆಗೆದು ಫೋಟೋ ಕ್ಲಿಕ್ಕಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.
ಈ ವಿಷಯ ಬೆಳಕಿಗೆ ಬಂದ ಬಳಿಕ ಆಸ್ಪತ್ರೆ ಆಡಳಿತ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮೃತರ ಗೌರವ, ಕುಟುಂಬದ ಭಾವನೆಗಳು ಹಾಗೂ ವೈದ್ಯಕೀಯ ಗೌಪ್ಯತೆಗೆ ಧಕ್ಕೆ ಉಂಟುಮಾಡುವಂತಹ ಕೃತ್ಯ ಇದಾಗಿದೆ ಎಂದು ಹಲವರು ಖಂಡಿಸಿದ್ದಾರೆ. ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದ ಮುಖ್ಯಸ್ಥ ಡಾ. ಮೋಸಿನ್ ಉಲ್ ಹಕ್ ಅವರು ಬೀದರ್‌ನ ನ್ಯೂ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಯ ವಿರುದ್ಧ ಬಿಎನ್‌ಎಸ್ (ಭಾರತೀಯ ನ್ಯಾಯ ಸಂಹಿತೆ) ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕರು ಆಸ್ಪತ್ರೆಯ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, “ಬದುಕಿದ್ದಾಗ ಸಮರ್ಪಕ ಚಿಕಿತ್ಸೆ ಸಿಗುವುದಿಲ್ಲ, ಸತ್ತ ಬಳಿಕವೂ ಗೌರವ ಸಿಗುತ್ತಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.









