(ನ್ಯೂಸ್ ಕಡಬ) newskadaba.com, ಮೇ.29: ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ತೀರ್ಪುಗಳು ಮತ್ತು ಜಾಮೀನು ಆದೇಶಗಳ ವಿಳಂಬಕ್ಕೆ ಮುಕ್ತಿ ಹಾಡಲು ಸುಪ್ರೀಂಕೋರ್ಟ್ ಶುಕ್ರವಾರ ಒಂದು ಮಹತ್ವದ ನಿರ್ದೇಶನ ನೀಡಿದೆ.
ತೀರ್ಪು ನೀಡಲು ವಿಳಂಬ ಮಾಡುವುದರಿಂದ ದಾವೆದಾರರಿಗೆ ತುಂಬಲಾರದ ನಷ್ಟವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಎಲ್ಲಾ ಹೈಕೋರ್ಟ್‌ಗಳಿಗೆ ಕಟ್ಟುನಿಟ್ಟಾದ ಗಡುವನ್ನು ವಿಧಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142 ನೇ ವಿಧಿಯಡಿ ತಮಗಿರುವ ವಿಶೇಷ ಅಧಿಕಾರವನ್ನು ಬಳಸಿ ಈ ಆದೇಶಗಳನ್ನು ಹೊರಡಿಸಿದೆ. ಹೈಕೋರ್ಟ್‌ಗಳು ಯಾವುದೇ ಪ್ರಕರಣದ ವಾದ-ಪ್ರತಿವಾದ ಆಲಿಸಿ ಆದೇಶವನ್ನು ಕಾಯ್ದಿರಿಸಿದ ದಿನಾಂಕದಿಂದ ಗರಿಷ್ಠ 3 ತಿಂಗಳ ಒಳಗಾಗಿ ಅಂತಿಮ ತೀರ್ಪನ್ನು ಪ್ರಕಟಿಸಬೇಕು.
ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳಲ್ಲಿ ತ್ವರಿತ ನಿರ್ಧಾರಗಳು ಅಗತ್ಯ. ಹೀಗಾಗಿ ಜಾಮೀನು ಅರ್ಜಿಗಳ ಆದೇಶಗಳನ್ನು ಅದೇ ದಿನ ಪ್ರಕಟಿಸಬೇಕು. ಒಂದು ವೇಳೆ ಆದೇಶ ಕಾಯ್ದಿರಿಸಿದರೆ, ಮರುದಿನವೇ ಅದನ್ನು ಪ್ರಕಟಿಸಿ, ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಬೇಕು. ಜಾಮೀನು ಅಥವಾ ಶಿಕ್ಷೆ ಅಮಾನತು ಆದೇಶ ಹೊರಬಿದ್ದ ತಕ್ಷಣ ಆ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತ್ವರಿತವಾಗಿ ತಲುಪಿಸಬೇಕು. ಅಗತ್ಯ ಪ್ರಕ್ರಿಯೆಗಳನ್ನು ಮುಗಿಸಿ ವಿಚಾರಣಾಧೀನ ಕೈದಿಗಳನ್ನು ಅದೇ ದಿನ ಅಥವಾ ಹೆಚ್ಚೆಂದರೆ ಮರುದಿನವೇ ಜೈಲಿನಿಂದ ಬಿಡುಗಡೆ ಮಾಡಬೇಕು. ಹೈಕೋರ್ಟ್‌ಗಳು ನೀಡುವ ಎಲ್ಲಾ ತೀರ್ಪುಗಳನ್ನು ಅವು ಪ್ರಕಟವಾದ 24 ಗಂಟೆಗಳ ಒಳಗೆ ಆಯಾ ಹೈಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವುದು ಕಡ್ಡಾಯ.
ಜಾರ್ಖಂಡ್ ಹೈಕೋರ್ಟ್‌ನಲ್ಲಿ ತೀರ್ಪುಗಳು ದೀರ್ಘಕಾಲದವರೆಗೆ ವಿಳಂಬವಾಗುತ್ತಿದ್ದ ವಿಷಯಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ. ಕೇಂದ್ರ ಮತ್ತು ರಾಜ್ಯಗಳ ಕೆಳ ನ್ಯಾಯಾಲಯಗಳಿಗೂ ನಿಯಮಿತ ಜಾಮೀನು ಆದೇಶಗಳ ಕುರಿತು ತಕ್ಷಣದ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.














