(ನ್ಯೂಸ್ ಕಡಬ) newskadaba.com, ಮೇ.28: : ರಾಜ್ಯ ಕಂದಾಯ ಇಲಾಖೆಯಲ್ಲಿ ಮಹತ್ವದ ಆಡಳಿತಾತ್ಮಕ ಬದಲಾವಣೆ ನಡೆದಿದ್ದು, ಕಡಬ ತಾಲೂಕು ತಹಶೀಲ್ದಾರ್ ಸೇರಿದಂತೆ ರಾಜ್ಯದ ಒಟ್ಟು 27 ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆಗೊಳಿಸಿ ಕರ್ನಾಟಕ ಸರ್ಕಾರ ಬುಧವಾರ (ಮೇ 27) ರಾತ್ರಿ ಅಧಿಸೂಚನೆ ಹೊರಡಿಸಿದೆ.
ಕಡಬ ತಹಶೀಲ್ದಾರ್ ಕಲಬುರಗಿಗೆ ವರ್ಗಾವಣೆ: ಕಡಬ ತಾಲ್ಲೂಕಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಪ್ರಭಾಕರ ಖಜೂರೆ ಅವರನ್ನು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ. ಕಮಲಾಪುರದಲ್ಲಿದ್ದ ಮೊಹ್ಮದ ಮೊಹಸೀನ್ ಅವರ ಜಾಗಕ್ಕೆ ಪ್ರಭಾಕರ್ ಖಜೂರೆ ಅವರನ್ನು ನಿಯೋಜಿಸಲಾಗಿದೆ. ಕಡಬಕ್ಕೆ ಸದ್ಯ ಯಾರನ್ನೂ ಸ್ಥಳನಿಯುಕ್ತಿಗೊಳಿಸದೆ ಹುದ್ದೆಯನ್ನು ಬಾಕಿ ಇರಿಸಲಾಗಿದೆ.
ಬೆಳ್ತಂಗಡಿಗೆ ಪೃಥ್ವಿ ಸಾನಿಕಂ ನಿಯುಕ್ತಿ: ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕಿಗೆ ಬೆಳ್ತಂಗಡಿ ತಾಲೂಕು ತಹಶೀಲ್ದಾರ್ ಪೃಥ್ವಿ ಸಾನಿಕಂ ಅವರನ್ನು ಖಾಲಿ ಇರುವ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಿ ಕಂದಾಯ ಇಲಾಖೆ ಆದೇಶಿಸಿದೆ.
ತಕ್ಷಣ ವರದಿ ಒಪ್ಪಿಸಲು ಸೂಚನೆ: ವರ್ಗಾವಣೆಗೊಂಡಿರುವ ಎಲ್ಲಾ ಅಧಿಕಾರಿಗಳು ವಿಳಂಬ ಮಾಡದೆ ತಕ್ಷಣವೇ ನಿಯೋಜಿತ ಸ್ಥಳಗಳಲ್ಲಿ ಅಧಿಕಾರ ವಹಿಸಿಕೊಳ್ಳಬೇಕು ಹಾಗೂ ತಮ್ಮ ಕಾರ್ಯಭಾರ ಸ್ವೀಕಾರ ವರದಿ (CTC) ಯನ್ನು ಕಡ್ಡಾಯವಾಗಿ ಸರ್ಕಾರದ ಅಧಿಕೃತ ಇ-ಮೇಲ್ ವಿಳಾಸಕ್ಕೆ ರವಾನಿಸಬೇಕು ಎಂದು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಕೆ. ನರಸಿಂಹಮೂರ್ತಿ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.









