(ನ್ಯೂಸ್ ಕಡಬ) newskadaba.com ಮೇ. 23. ಬಂಟ್ವಾಳ ತಾಲೂಕಿನ ಬಿ. ಮೂಡ ಗ್ರಾಮದ ಗೂಡಿನಬಳಿ ಕಂಚಿಕಾರಪೇಟೆ ಸಮೀಪ ನೇತ್ರಾವತಿ ನದಿಯ ಹೊಸ ಸೇತುವೆಯಡಿಯಲ್ಲಿ ಸ್ಥಳೀಯ ಯುವಕ ಇರ್ಫಾನ್ ಅವರ ಮೃತದೇಹ ಪತ್ತೆಯಾಗಿರುವ ಘಟನೆ ಅತ್ಯಂತ ದುಃಖಕರ ಹಾಗೂ ಹಲವು ಅನುಮಾನಗಳಿಗೆ ಕಾರಣವಾಗಿರುವ ಸಂಗತಿಯಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಅಕ್ಬರ್ ಅಲಿ ಪೊನ್ನೋಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಮೃತ ಇರ್ಫಾನ್ (37) ಅವರು ಗೂಡಿನಬಳಿ ನಿವಾಸಿಯಾಗಿದ್ದು, ಅವರ ಮೃತದೇಹ ವಿರೂಪಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮತ್ತು ಶಂಕೆಗೆ ಕಾರಣವಾಗಿದೆ. ಘಟನೆ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದ ಅಗತ್ಯತೆಯಿದೆ. ಸಂಬಂಧಪಟ್ಟ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಪ್ರಕರಣವನ್ನು ಸಾಮಾನ್ಯ ಘಟನೆ ಎಂದು ಪರಿಗಣಿಸದೆ, ಎಲ್ಲಾ ಆಯಾಮಗಳಲ್ಲೂ ಸೂಕ್ಷ್ಮ ತನಿಖೆ ನಡೆಸಿ ಸಾವಿನ ನಿಜವಾದ ಕಾರಣವನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು.
ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಹೆಚ್ಚುತ್ತಿರುವ ಅಸುರಕ್ಷಿತ ವಾತಾವರಣ ಜನಸಾಮಾನ್ಯರಲ್ಲಿ ಭಯ ಮೂಡಿಸುತ್ತಿದೆ. ಸಾಮಾನ್ಯ ನಾಗರಿಕರ ಜೀವ ಭದ್ರತೆ ಕಾಪಾಡುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಮೇಲಿದೆ. ಆದ್ದರಿಂದ ಈ ಪ್ರಕರಣದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವಾಗಬಾರದು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಮುಂದೆ ತಂದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಮೃತ ಇರ್ಫಾನ್ ಅವರ ಅಗಲಿಕೆ ಕುಟುಂಬಕ್ಕೆ ಹಾಗೂ ಆತ್ಮೀಯರಿಗೆ ತುಂಬಲಾರದ ನಷ್ಟವಾಗಿದೆ. ಮೃತರ ದುಃಖಿತ ಕುಟುಂಬಕ್ಕೆ ಈ ನೋವನ್ನು ಭರಿಸುವ ಶಕ್ತಿಯನ್ನು ಸೃಷ್ಟಿಕರ್ತನು ಕರುಣಿಸಲಿ ಎಂದು ಸಂತಾಪವನ್ನು ಸೂಚಿಸಿದರು.









