(ನ್ಯೂಸ್ ಕಡಬ) newskadaba.com, ಮೇ.20: ಕ್ರೂಸ್ ಪ್ರವಾಸೋದ್ಯಮ ವರ್ಷದ ೫ನೇ ಹಾಗೂ ಅಂತಿಮ ಐಷಾರಾಮಿ ಹಡಗು ’ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್ ಐಷಾರಾಮಿ ಹಡಗು ನವ ಮಂಗಳೂರು ಬಂದರಿಗೆ ಮಂಗಳವಾರಆಗಮಿಸಿದೆ.
ಬಹಾಮಾಸ್ ಧ್ವಜ ಹೊಂದಿರುವ, ನಾರ್ವೇಜಿಯನ್ ಕ್ರೂಸ್ ಲೈನ್ ಸಂಸ್ಥೆಗೆ ಸೇರಿದ ಈ ಐಷಾರಾಮಿ ಹಡಗಿನಲ್ಲಿ ೪೨೭ ಪ್ರಯಾಣಿಕರು ಮತ್ತು ೩೭೨ ಸಿಬ್ಬಂದಿ ಇದ್ದರು.
ಹಡಗಿನಲ್ಲಿ ಬಂದರಿಗೆ ಬಂದಿಳಿದ ಪ್ರವಾಸಿಗರಿಗೆ ಕರಾವಳಿಯ ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯ ಸ್ವಾಗತ ಕೋರ ಲಾಯಿತು. ಪ್ರವಾಸಿಗರಿಗಾಗಿ ನಗರದ ಪ್ರಮುಖ ತಾಣಗಳ ವೀಕ್ಷಣೆ, ಪ್ರವಾಸೋದ್ಯಮ ಸೌಲಭ್ಯಗಳು ಹಾಗೂ ವಿಶೇಷ ಮಾರ್ಗದರ್ಶಿ ಧ್ಯಾನ ತರಗತಿಗಳನ್ನು ಎನ್‌ಎಂಪಿಎ ವತಿಯಿಂದ ಆಯೋಜಿಸಲಾಗಿತ್ತು.
ಕೊನೆಯ ಹಡಗು: ’ಎಂ.ಎಸ್. ಸೆವೆನ್ ಸೀಸ್ ನ್ಯಾವಿಗೇಟರ್ ಆಗಮನದೊಂದಿಗೆ ನವ ಮಂಗಳೂರು ಬಂದರು ಪ್ರಸಕ್ತ ಸಾಲಿನ ಕ್ರೂಸ್ ಪ್ರವಾಸೋದ್ಯಮ ಸೀಸನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಈ ವರ್ಷ ಒಟ್ಟು ೫ ಬೃಹತ್ ಕ್ರೂಸ್ ಹಡಗುಗಳು ಬಂದರಿಗೆ ಭೇಟಿ ನೀಡಿದ್ದು, ಒಟ್ಟು ೨,೦೭೯ ಪ್ರವಾಸಿಗರನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ಆ ಮೂಲಕ ಭಾರತದ ಪಶ್ಚಿಮ ಕರಾವಳಿಯಲ್ಲಿ ನವ ಮಂಗಳೂರು ಬಂದರು ಪ್ರಮುಖ ಕ್ರೂಸ್ ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ
’ರಾಜ್ಯ ಪ್ರವಾಸೋದ್ಯಮ ಕಾರ್ಯದರ್ಶಿ, ಡಿಸಿ ಭೇಟಿ
ನವ ಮಂಗಳೂರು ಬಂದರು ಪ್ರಾಧಿಕಾರಕ್ಕೆ (ಎನ್‌ಎಂಪಿಎ) ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ತ್ರಿಲೋಕ್ ಚಂದ್ರ ಕೆ. ವಿ. ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಮಂಗಳವಾರ ಭೇಟಿ ನೀಡಿ, ಕ್ರೂಸ್ ಪ್ರವಾಸೋದ್ಯಮ ಉಪಕ್ರಮಗಳು ಮತ್ತು ಮುಂದಿನ ಅಭಿವೃದ್ಧಿ ಯೋಜನೆಗಳ ಕುರಿತು ಪ್ರಮುಖ ಪರಿಶೀಲನಾ ಸಭೆ ನಡೆಸಿದರು.
ಬಂದರಿಗೆ ಆಗಮಿಸಿದ ಗಣ್ಯರನ್ನು ಎನ್‌ಎಂಪಿಎ ಉಪಾಧ್ಯಕ್ಷರಾದ ಎಸ್. ಶಾಂತಿ ಹಾಗೂ ಬಂದರಿನ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಆತ್ಮೀಯವಾಗಿ ಬರಮಾಡಿಕೊಂಡರು.
ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ:
ಈ ಸಂದರ್ಶನದಲ್ಲಿ, ನವ ಮಂಗಳೂರು ಬಂದರಿನ ಕ್ರೂಸ್ ಪ್ರವಾಸೋದ್ಯಮ ಸಾಮರ್ಥ್ಯವನ್ನು ಬಲಪಡಿಸುವ ಮತ್ತು ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಎತ್ತರಕ್ಕೊಯ್ಯುವ ಕುರಿತು ವಿವರವಾದ ಚರ್ಚೆಗಳು ನಡೆದವು.
ಪ್ರವಾಸೋದ್ಯಮ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಅವರು ಬಂದರಿನಲ್ಲಿರುವ ಪ್ರಯಾಣಿಕರ ನಿರ್ವಹಣಾ ಸೌಲಭ್ಯ ಗಳು, ವಲಸೆ ಮತ್ತು ಕಸ್ಟಮ್ಸ್ ವ್ಯವಸ್ಥೆಗಳು ಹಾಗೂ ಕ್ರೂಸ್ ಟರ್ಮಿನಲ್ ಮೂಲಸೌಕರ್ಯಗಳನ್ನು ಖುದ್ದಾಗಿ ಪರಿಶೀಲಿಸಿದರು.
ಕರಾವಳಿ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳಾದ ಪ್ರಾಚೀನ ಕಡಲತೀರಗಳು, ಐತಿಹಾಸಿಕ ದೇವಾಲಯಗಳು, ಪರಂಪರೆ ಕೇಂದ್ರಗಳು, ಪರಿಸರ ಪ್ರವಾಸೋದ್ಯಮ ತಾಣಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ನವ ಮಂಗಳೂರು ಬಂದರು ಪ್ರಮುಖ ಹೆಬ್ಬಾಗಿಲಾಗಿದೆ ಎಂದು ಎನ್‌ಎಂಪಿಎ ಅಧಿಕಾರಿಗಳು ಈ ಸಂದರ್ಭದಲ್ಲಿ ವಿವರಿಸಿದರು.
ಮುಂಬರುವ ದಿನಗಳಲ್ಲಿ ಮತ್ತಷ್ಟು ದೇಶಿ ಮತ್ತು ವಿದೇಶಿ ಐಷಾರಾಮಿ ಕ್ರೂಸ್ ಹಡಗುಗಳನ್ನು ಆಕರ್ಷಿಸುವ ಬಗ್ಗೆಯೂ ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು. ಪ್ರಯಾಣಿಕರ ಉತ್ತಮ ಅನುಭವಕ್ಕಾಗಿ ಬಂದರು ಪ್ರಾಧಿಕಾರ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಡಾ. ತ್ರಿಲೋಕ್ ಚಂದ್ರ ಅವರು ಶ್ಲಾಘಿಸಿದರು.
ನವಮಂಗಳೂರು ಬಂದರಿಗೆ ಐಷಾರಾಮಿ ಹಡಗು ಆಗಮನ









