ನಾಳೆ ಔಷಧಿ ಅಂಗಡಿ ಬಂದ್‌ : ಈಗಲೇ ಅಗತ್ಯ ಔಷಧಿ ಖರೀದಿಸಿಕೊಳ್ಳಿ

(ನ್ಯೂಸ್ಕಡಬ) newskadaba.com, ಮೇ.19:  ನಿಮಗೆ ಅವಶ್ಯವಿರುವ ಔಷಧಿಗಳನ್ನು ಇಂದೇ ತೆಗೆದಿರಿಸಿ ಕೊಳ್ಳಿ, ಇಲ್ಲದಿದ್ದರೆ ಪಶ್ಚಾತಾಪಡುವ ಸಾಧ್ಯತೆಗಳಿವೆ. ಏಕೆ ಅಂತೀರಾ… ಇಂದು ಮಧ್ಯರಾತ್ರಿ ಯಿಂದ ರಾಜ್ಯದಲ್ಲಿರುವ ಎಲ್ಲ ಮೆಡಿಕಲ್‌ ಸ್ಟೋರ್‌ಗಳು ಬಂದ್‌ ಆಗುತ್ತಿವೆ.ದೇಶವ್ಯಾಪಿ ಕರೆ ನೀಡಿರುವ ಅಖಿಲ ಭಾರತ ಔಷಧಿ ವ್ಯಾಪಾರಿಗಳ ಸಂಘದ ಬಂದ್‌ ನಿರ್ಧಾರಕ್ಕೆ ಕರ್ನಾಟಕದ ಔಷಧ ವ್ಯಾಪಾರಿಗಳ ಸಂಘಟನೆಗಳು ಸಹ ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆಯಿಂದ ಮೆಡಿಕಲ್‌ ಸ್ಟೋರ್‌ಗಳನ್ನು ಬಂದ್‌ ಮಾಡಲಾಗುತ್ತಿದೆ.

ರಾಜ್ಯದಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಮೆಡಿಕಲ್‌ ಸ್ಟೋರ್‌ಗಳು ಹಾಗೂ ನಗರದಲ್ಲಿರುವ ಸುಮಾರು 6,500ಕ್ಕೂ ಹೆಚ್ಚು ಮೆಡಿಕಲ್‌ ಸ್ಟೋರ್‌ಗಳು ನಾಳೆ ಬಾಗಿಲು ತೆರೆಯುತ್ತಿಲ್ಲ. ದೇಶಾದ್ಯಂತ ಸುಮಾರು 12 ಲಕ್ಷ ಮೆಡಿಕಲ್‌ ಶಾಪ್‌ಗಳು ಈ ಹೋರಾಟದಲ್ಲಿ ಭಾಗಿಯಾಗಲಿವೆ ಎಂದು ನಂಬಲಾಗಿದೆ.

ಹೋರಾಟದ ಮೂಲ ಕಾರಣ ಏನು? ಆನ್‌ಲೈನ್‌‍ ಮೂಲಕ ಔಷಧ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆ ಸಾಂಪ್ರದಾಯಿಕ ಮೆಡಿಕಲ್‌ ಅಂಗಡಿಗಳಿಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ವಿಶೇಷವಾಗಿ ಆನ್‌ಲೈನ್‌ಗಳು ಹಾಗೂ ವಿವಿಧ ಆಪ್‌ಗಳ ಮೂಲಕ ಔಷಧಿ ವಿತರಣೆ ಹೆಚ್ಚುತ್ತಿರುವುದನ್ನು ಸಂಘಟನೆಗಳು ವಿರೋಧಿಸುತ್ತಿವೆ.

ಪ್ರಿಸ್ಕ್ರಿಪ್ಷನ್‌ ಇಲ್ಲದೇ ಔಷಧಿಗಳು ಮಾರಾಟವಾಗುತ್ತಿರುವುದು, ನಕಲಿ ಔಷಧಿಗಳ ಭೀತಿ, ಆಂಟಿಬಯೋಟಿಕ್‌ ದುರುಪಯೋಗ ಹಾಗೂ ನಿಯಂತ್ರಣರಹಿತ ಇ-ಫಾರ್ಮಸಿ ವ್ಯವಸ್ಥೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟಾಗುತ್ತಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವ್ಯಾಪಾರಿಗಳು ಮುಂದಿಟ್ಟಿರುವ ಪ್ರಮುಖ ಆತಂಕಗಳು: ಅಕ್ರಮ ಇ-ಫಾರ್ಮಸಿಗಳನ್ನು ಬಂದ್‌ ಮಾಡಬೇಕು. ಅತಿಯಾದ ಡಿಸ್ಕೌಂಟ್‌ ನೀತಿಗೆ ಕಡಿವಾಣ ಹಾಕಬೇಕು ಸಣ್ಣ ಔಷಧ ವ್ಯಾಪಾರಿಗಳನ್ನು ರಕ್ಷಿಸಬೇಕು ಎನ್ನುವುದು ನಮ ಪ್ರಮುಖ ಬೇಡಿಕೆಯಾಗಿದೆ ಎಂದು ಕರ್ನಾಟಕ ಸ್ಟೇಟ್‌ ಡ್ರಗ್ಗಿಸ್ಟ್‌ ಅಂಡ್‌ ಕೆಮಿಸ್ಟ್‌ ಅಸೋಸಿಯೇಷನ್‌ ಅಧ್ಯಕ್ಷ ರಘುನಾಥ್‌ ರೆಡ್ಡಿ ತಿಳಿಸಿದ್ದಾರೆ.ಇದು ಸಾರ್ವಜನಿಕರಿಗೆ ತೊಂದರೆ ಕೊಡಲು ನಡೆಸುವ ಹೋರಾಟ ಅಲ್ಲ. ಆನ್‌ಲೈನ್‌‍ ಔಷಧ ವ್ಯಾಪಾರದಿಂದ ಸಾವಿರಾರು ಮೆಡಿಕಲ್‌ ಅಂಗಡಿಗಳ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಮ್ಮ ಹಕ್ಕುಗಳಿಗಾಗಿ ಅನಿವಾರ್ಯ ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Scroll to Top