ಅನ್ನ ಭಾಗ್ಯ ಯೋಜನೆಯಡಿ ಮೇ ತಿಂಗಳಿಂದ ಅಕ್ಕಿ ಜತೆ 2 ಕೆ.ಜಿ. ರಾಗಿ ವಿತರಣೆ: ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ ಸಿಹಿಸುದ್ದಿ



(ನ್ಯೂಸ್‌ ಕಡಬ) newskadaba.comಮೇ.08: ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ ಅನ್ನ ಭಾಗ್ಯ ಯೋಜನೆಯಡಿ ಈ ತಿಂಗಳಿಂದ ಅಕ್ಕಿ ಜತೆಗೆ ರಾಗಿಯೂ ಸಿಗಲಿದೆ. ಸದ್ಯ ಪ್ರತಿ ವ್ಯಕ್ತಿಗೆ ರಾಜ್ಯ ಹಾಗೂ ಕೇಂದ್ರದ್ದು ಸೇರಿ ಒಟ್ಟು 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಈ ತಿಂಗಳಿಂದ ಗ್ರಾಹಕರಿಗೆ 2 ಕೆ.ಜಿ. ರಾಗಿ ನೀಡಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ನಿರ್ಧರಿಸಿದೆ.







ರಾಜ್ಯದಲ್ಲಿ ಈಗ 1.14 ಕೋಟಿಗೂ ಹೆಚ್ಚು ಬಿಪಿಎಲ್‌ ಕಾರ್ಡ್‌ಗಳಿದ್ದು, 4.01 ಕೋಟಿಗೂ ಹೆಚ್ಚು ಸದಸ್ಯರಿದ್ದಾರೆ. ಅವರಿಗೆ ಪ್ರತಿ ತಿಂಗಳು 57 ಸಾವಿರ ಮೆಟ್ರಿಕ್‌ ಟನ್‌ ರಾಗಿ ಅಗತ್ಯವಿದ್ದು, 10 ತಿಂಗಳಿಗೆ ನೀಡಲು ಅಗತ್ಯವಿರುವಷ್ಟು ಸಂಗ್ರಹಿಸಲಾಗಿದೆ. ಇದರ ಜತೆಗೆ, ಉಳಿದ ಸುಮಾರು 20-30 ಸಾವಿರ ಮೆಟ್ರಿಕ್‌ ಟನ್‌ನಷ್ಟು ರಾಗಿಯನ್ನು ಅನ್ಯ ರಾಜ್ಯಗಳಿಗೆ ನೀಡಲು ನಿಗಮ ನಿರ್ಧರಿಸಿದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮವು 5.2 ಲಕ್ಷ ಮೆಟ್ರಿಕ್‌ ಟನ್‌ ರಾಗಿಯನ್ನು ಬೆಂಬಲ ಬೆಲೆಯಡಿ ರೈತರಿಂದ ಖರೀದಿಸಿ ದಾಸ್ತಾನು ಮಾಡಿದೆ.






ರಾಗಿ ಮಾರಾಟ ಮಾಡಲು ಮೇ 15ರವರೆಗೆ ನೋಂದಾಯಿತ ರೈತರಿಗೆ ಅವಕಾಶ ನೀಡಲಾಗಿದೆ. 6 ಲಕ್ಷ ಮೆಟ್ರಿಕ್‌ ಟನ್‌ಗೂ ಅಧಿಕ ರಾಗಿ ಸಂಗ್ರಹ ಗುರಿ ಹೊಂದಿದ್ದು, ಮೇ ತಿಂಗಳವರೆಗೆ ಖರೀದಿ ನಡೆಯುತ್ತದೆ. ಹತ್ತು ತಿಂಗಳಿಗೆ ವಿತರಣೆ ಮಾಡುವಷ್ಟು ರಾಗಿ-ಜೋಳ ಖರೀದಿಸಿ ಸಂಗ್ರಹಿಸಿಡಲಾಗುವುದು. ಈ ಸಂಬಂಧ ಕೇಂದ್ರ ಸರಕಾರದಿಂದ ಅನುಮೋದನೆ ಪಡೆದು ವಿತರಿಸಲು ಉದ್ದೇಶಿಸಲಾಗಿದೆ.

ರಾಜ್ಯದಲ್ಲಿ ಸುಮಾರು 8-10 ಜಿಲ್ಲೆಗಳನ್ನು ಹೊರತುಪಡಿಸಿದರೆ ಮಾಸಿಕ 57 ಸಾವಿರ ಮೆಟ್ರಿಕ್‌ ಟನ್‌ ರಾಗಿ ಬೇಕಾಗುತ್ತದೆ. 8-9 ಸಾವಿರ ಮೆಟ್ರಿಕ್‌ ಟನ್‌ ಜೋಳ ಬೇಕಾಗುತ್ತದೆ ಎಂದು ಇಲಾಖೆ ಅಂದಾಜಿಸಿದೆ. ಹಳೇ ಮೈಸೂರು ಭಾಗದವರಿಗೆ 2 ಕೆಜಿ ರಾಗಿ ಹಾಗೂ ಹೈದರಾಬಾದ್‌ ಕರ್ನಾಟಕ ಹಾಗೂ ಮುಂಬಯಿ ಕರ್ನಾಟಕ ಭಾಗದ ಪಡಿತರದಾರರಿಗೆ 2 ಕೆಜಿ ಜೋಳ ನೀಡಲು ನಿಗಮ ನಿರ್ಧರಿಸಿದೆ.

ಮೇ-2026ರ ತಿಂಗಳ ಪಡಿತರ ವಿತರಣೆ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ-2013ರಡಿ ಮೇ-2026 ಮತ್ತು ಜೂನ್‌-2026ರ ಮಾಹೆಯ ಆಹಾರಧಾನ್ಯಗಳನ್ನು ಮೇ-2026ರ ಮಾಹೆಯಲ್ಲಿಯೇ ವಿತರಣೆ ಮಾಡಲು ಸರಕಾರವು ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಮೇ-2026ರ ಮಾಹೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಕೇಂದ್ರ ವ್ಯಾಪ್ತಿಯ ಪ್ರತಿ ಅಂತ್ಯೋದಯ (ಎಎವೈ) ಪಡಿತರ ಚೀಟಿಗೆ 42 ಕೆ.ಜಿ. ರಾಗಿ ಮತ್ತು 28 ಕೆ.ಜಿ. ಅಕ್ಕಿ ಒಟ್ಟು 70 ಕೆ.ಜಿ ಹಾಗೂ ಪಿ.ಎಚ್‌.ಎಚ್‌. ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 6 ಕೆ.ಜಿ. ರಾಗಿ ಮತ್ತು 4 ಕೆ.ಜಿ. ಅಕ್ಕಿ ಒಟ್ಟು 10 ಕೆ.ಜಿ. ಮತ್ತು ರಾಜ್ಯ ವ್ಯಾಪ್ತಿಯ ಪಡಿತರ ಚೀಟಿ ಸದಸ್ಯರಿಗೆ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುವುದು.

ಪ್ರತಿ ದಿನ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನ್ಯಾಯಬೆಲೆ ಅಂಗಡಿಯಲ್ಲಿ ಸರ್ವರ್‌ ಲಭ್ಯಗೊಳಿಸಿರುವುದರಿಂದ ಪಡಿತರ ಚೀಟಿದಾರರು ಇದರ ಸದುಪಯೋಗಪಡಿಸಿಕೊಂಡು ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯ ಮುಖಾಂತರ ಪಡಿತರ ಪಡೆಯುವ ಸಮಯದಲ್ಲಿ 2 ಬಾರಿ ಬಯೋಮೆಟ್ರಿಕ್‌ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಅನ್ನಸುವಿಧಾ ಯೋಜನೆಯ ಪಡಿತರ ಫಲಾನುಭವಿಗಳು ಮೇ ಮತ್ತು ಜೂನ್‌ 2026 ರ ಮಾಹೆಯಲ್ಲಿತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ 2 ಬಾರಿ ಬಯೋಮೆಟ್ರಿಕ್‌ ನೀಡಿ ಪಡಿತರ ಪಡೆದುಕೊಳ್ಳಬಹುದಾಗಿದೆ.

error: Content is protected !!
Scroll to Top