(ನ್ಯೂಸ್ ಕಡಬ) newskadaba.com, ಮೇ.08: ಶಿಕ್ಷಣ ತಜ್ಞರು, ಆಧ್ಯಾತ್ಮಿಕ ಮಾರ್ಗದರ್ಶಕರಾಗಿ ಸಾವಿರಾರು ಶಿಷ್ಯರನ್ನು ರೂಪಿಸಿದ್ದ ಗೌರವಾನ್ವಿತ ಜೆಸ್ಯೂಟ್ ಧರ್ಮಗುರು ಫಾದರ್ ರವಿ ಸಂತೋಷ್ ಕಾಮತ್ ಎಸ್.ಜೆ (86) ಅವರು ಶುಕ್ರವಾರ ಮುಂಜಾನೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಈ ಬಗ್ಗೆ ಫಾತಿಮಾ ರಿಟ್ರೀಟ್ ಹೌಸ್‌ನ ಸುಪೀರಿಯರ್ ಫಾದರ್ ಐವನ್ ಮೆಂಡೋನ್ಸಾ ಎಸ್.ಜೆ ಮಾಹಿತಿ ನೀಡಿದ್ದು, “ಫಾದರ್ ಕಾಮತ್ ಅವರು ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಮೂಗಿನ ಮೂಲಕ ಆಹಾರ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 3:45ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಫಾದರ್ ಕಾಮತ್ ಅವರ ಅಂತ್ಯಕ್ರಿಯೆಯ ವಿವರಗಳನ್ನು ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಭಾನುವಾರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.
ಬಾಲ್ಯ ಮತ್ತು ಶಿಕ್ಷಣ
1939ರ ಅಕ್ಟೋಬರ್ 5 ರಂದು ಬಜಪೆಯ ಕುಂಟಲ ಕಂಬ್ಳದಲ್ಲಿ ಜನಿಸಿದ ಇವರ ಪೂರ್ವಾಶ್ರಮದ ಹೆಸರು ರೊನಾಲ್ಡ್ ಪೆರೇರಾ. ಕುಟುಂಬದ 12 ಮಕ್ಕಳಲ್ಲಿ ಇವರು ಎಂಟನೆಯವರು. ಬಜಪೆ ಚರ್ಚ್ ಶಾಲೆ ಮತ್ತು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ಇವರು, ಧಾರವಾಡದಲ್ಲಿ ತತ್ವಶಾಸ್ತ್ರ ಮತ್ತು ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ವಿದೇಶಿ ಭಾಷೆಗಳಲ್ಲಿ ಡಿಪ್ಲೊಮಾ ಪಡೆದಿದ್ದರು.
ಫಾದರ್ ರವಿ ಸಂತೋಷ್ ಕಾಮತ್ ಅವರು ಭಾಷಾ ಪ್ರೇಮಿಯಾಗಿದ್ದರು. ಅವರು ಕನ್ನಡ, ತುಳು, ಇಂಗ್ಲಿಷ್, ಹಿಂದಿ, ಕೊಂಕಣಿ ಮಾತ್ರವಲ್ಲದೆ ಲ್ಯಾಟಿನ್, ಫ್ರೆಂಚ್, ಇಟಾಲಿಯನ್, ಜರ್ಮನ್, ಸ್ಪ್ಯಾನಿಷ್, ತಮಿಳು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದ್ದರು. ಫಾತಿಮಾ ರಿಟ್ರೀಟ್ ಹೌಸ್‌ನಲ್ಲಿ ‘ಫ್ರೆಂಚ್ ಕನೆಕ್ಷನ್’ ಅಡಿಯಲ್ಲಿ ವಿದೇಶಿ ಭಾಷಾ ತರಗತಿಗಳನ್ನೂ ನಡೆಸುತ್ತಿದ್ದರು.
ಫಾದರ್ ರವಿ ಸಂತೋಷ್ ಕಾಮತ್ ಅವರು 1958ರಲ್ಲಿ ಕ್ಯಾಲಿಕಟ್‌ನ ಜೆಸ್ಯೂಟ್ ಸೆಮಿನರಿಗೆ ಸೇರ್ಪಡೆಗೊಂಡರು. ಅವರು ರೋಮ್‌ನ ಗ್ರೆಗೋರಿಯನ್ ವಿಶ್ವವಿದ್ಯಾಲಯದಿಂದ ಸಿಸ್ಟಮ್ಯಾಟಿಕ್ ಥಿಯಾಲಜಿಯಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಮಂಗಳೂರಿನ ಜೆಪ್ಪು ಸೆಮಿನರಿಯಲ್ಲಿ ಸುಮಾರು 36 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸಾವಿರಾರು ಧರ್ಮಗುರುಗಳಿಗೆ ಮಾರ್ಗದರ್ಶಕರಾಗಿದ್ದರು. ಮಾರ್ಚ್ 2021 ರಲ್ಲಿ ಇವರು ತಮ್ಮ ಪುರೋಹಿತಶಾಹಿಯ 50 ವರ್ಷಗಳ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿದ್ದರು.
ಫಾದರ್ ಕಾಮತ್ ಅವರ ನಿಧನಕ್ಕೆ ಜೆಸ್ಯೂಟ್ ಸಮುದಾಯ, ಧರ್ಮಗುರುಗಳು, ಸಾವಿರಾರು ಶಿಷ್ಯರು, ಮಂಗಳೂರಿನ ಕ್ರೈಸ್ತ ಭಕ್ತಾದಿಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.









