(ನ್ಯೂಸ್ ಕಡಬ) newskadaba.com, ಮೇ.02: ರಾಜ್ಯದಲ್ಲಿ ಲಕ್ಷಾಂತರ ಬಡವರು ಬಿಪಿಎಲ್ ಪಡಿತರ ಚೀಟಿಗಾಗಿ ಕಾಯುತ್ತಿದ್ದರೂ, ರಾಜ್ಯ ಸರಕಾರ ಮಾತ್ರ ಕಳೆದ 3 ವರ್ಷಗಳಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನೇ ಕರೆದಿಲ್ಲ. ಇದರಿಂದ ಅರ್ಹ ಬಡವರು ಬಿಪಿಎಲ್ ಸೌಲಭ್ಯ ವಂಚಿತರಾಗಿದ್ದಾರೆ.
ರಾಜ್ಯ ಸರಕಾರದ ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಸ್ತುತ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯವರಿಗೆ, ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ, ಬುಡಕಟ್ಟು ಜನಾಂಗದವರಿಗೆ ಆದ್ಯತಾ ಪಡಿತರ ಚೀಟಿ ನೀಡುತ್ತಿದೆ. ಇದರ ಹೊರತಾಗಿ ಲಕ್ಷಾಂತರ ಮಂದಿ ಬಿಪಿಎಲ್ ಪಡಿತರ ನಿರೀಕ್ಷೆಯಲ್ಲಿದ್ದಾರೆ.
ರಾಜ್ಯದಲ್ಲಿ ಅಂತ್ಯೋದಯ ಅನ್ನ ಪಡಿತರ ಚೀಟಿ (ಎಎವೈ)ಗಳು 10,47,080 ಇದ್ದು, 42,76,526 ಫಲಾನುಭವಿಗಳಿದ್ದಾರೆ. ಆದ್ಯತಾ ಪಡಿತರ ಚೀಟಿಗಳು(ಬಿಪಿಎಲ್) 1,14,38,886 ಇದ್ದು, 4,00,46,744 ಫಲಾನುಭವಿಗಳಿದ್ದಾರೆ. ಆದ್ಯತೇತರ ಪಡಿತರ ಚೀಟಿಗಳು 29,71,601 ಇದ್ದು, 1,02,18,470 ಫಲಾನುಭವಿಗಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ 1,54,57,567 ಪಡಿತರ ಚೀಟಿಗಳಿದ್ದು, 5,45,41,740 ಫಲಾನುಭವಿಗಳಿದ್ದಾರೆ.
ಆಹಾರ ಇಲಾಖೆಯು ಜಿಲ್ಲೆಗಳಿಂದ ಸ್ವೀಕೃತವಾಗುವ ಪ್ರಸ್ತಾವನೆಯನ್ನಾಧರಿಸಿ 102 ಗಂಭೀರ ಕಾಯಿಲೆಗಳನ್ನು ಗುರುತಿಸಿ ವೈದ್ಯಕೀಯ ತುರ್ತು ಪ್ರಕರಣಗಳಿಗಾಗಿ ಪ್ರತ್ಯೇಕ ವಿಭಾಗ ಅಭಿವೃದ್ಧಿಪಡಿಸಿದೆ. ಪ್ರಸ್ತುತ ವೈದ್ಯಕೀಯ ತುರ್ತು ಮೊಡ್ಯೂಲ್ ಆಹಾರ ಇಲಾಖೆ ತಂತ್ರಾಂಶದಲ್ಲಿ ಲಭ್ಯವಿದೆ. ಈ ನಿಯಮ ಪ್ರಕಾರ ಇಲಾಖೆಯಿಂದ 102 ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದಾಗಿದೆ.









