(ನ್ಯೂಸ್ ಕಡಬ) newskadaba.com, ಮೇ.02: ಪುರುಷ ಪ್ರಧಾನ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರನ್ನು ತಮ್ಮ ಸಮನಾಗಿ ಕಾಣಲು, ತಮ್ಮ ಸ್ಥಾನವನ್ನು ಕಸಿದು ಬಿಡುತ್ತಾರೆ ಎಂಬ ಭೀತಿಯಿಂದ ಪುರುಷ ರಾಜಕಾರಣಿಗಳು ಕಳೆದ ಮೂವತ್ತು ವರ್ಷದಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾಗದಂತೆ ತಡೆಯಲು ಯಶಸ್ವಿಯಾಗಿದ್ದಾರೆ. ತಮಗೆ ಎದುರಾಗುವ ಸವಾಲುಗಳನ್ನು ನಿವಾರಿಸುವ ಜಾಣ್ಮೆ ಬಲಿತ ರಾಜಕಾರಣಿಗಳಿಗೆ ಅತ್ಯಂತ ಸುಲಭ.
ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆಯ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಎರಡನೇ ಮೂರರಷ್ಟು ಮತ ಪಡೆಯದೆ ಸೋಲಾಯಿತು. ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಸಮಾಜವಾದಿ ಮತ್ತು ಇತರ ಕೆಲವು ವಿರೋಧ ಪಕ್ಷಗಳು ಕ್ಷೇತ್ರ ಪುನರ್‌ವಿಂಗಡಣೆಯನ್ನು ವಿರೋಧಿಸುವ ನೆಪದಲ್ಲಿ ವ್ಯವಸ್ಥಿತವಾದ ಪಿತೂರಿಯ ಮೂಲಕ ಮಹಿಳಾ ಮೀಸಲಾತಿ 2029ರಿಂದ ಜಾರಿಯಾಗದ ಹಾಗೆ ಮಾಡಲು ಸಫಲರಾಗಿದ್ದಾರೆ.
ಮಹಿಳಾ ಮೀಸಲಾತಿಗೆ ಮೂವತ್ತು ವರ್ಷದ ಇತಿಹಾಸವಿದೆ. ಮೊಟ್ಟ ಮೊದಲ ಬಾರಿಗೆ 1996ರಲ್ಲಿ ಪ್ರಧಾನ ಮಂತ್ರಿ ದೇವೆಗೌಡರು ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲು ನೀಡುವ ಮಸೂದೆಯನ್ನು ಮಂಡಿಸಿದ್ದರು. ಯುನೈಟೆಡ್ ಫ್ರಂಟ್ ನೇತೃತ್ವದ ಸರಕಾರದಲ್ಲಿ ಬಹುತೇಕರು ಈ ಮಸೂದೆಯ ಕಡು ವಿರೋಧಿಗಳಾಗಿದ್ದರು. ವಿಶೇಷವಾಗಿ ಲಾಲು ಪ್ರಸಾದ್, ಮುಲಾಯಂ ಸಿಂಗ್ ಯಾದವ್ ಮತ್ತು ಶರದ್ ಯಾದವ್‌ರವರ ತೀವ್ರ ವಿರೋಧದಿಂದ ಮಸೂದೆಯನ್ನು ಜಂಟಿ ಸಂಸದೀಯ ಮಂಡಳಿಗೆ ಕಳುಹಿಸಲಾಯಿತು.
ವಾಜಪೇಯಿಯವರು ಮಹಿಳೆಯರಿಗೆ ಮೀಸಲು ನೀಡಲು 1999, 2002 ಮತ್ತು 2003ರಲ್ಲಿ ಪ್ರಯತ್ನಿಸಿ ವಿಫಲರಾದರು. 1998ರಲ್ಲಿ ಆರ್‌ಜೆಡಿ ಸಂಸದ ಸುಚೇಂದ್ರ ಪ್ರಸಾದ್ ಯಾದವ್ ಮಸೂದೆಯ ಪ್ರತಿಯನ್ನು ಲೋಕಸಭೆಯಲ್ಲಿ ಹರಿದು ಬಿಸಾಕಿದರು. 2010ರಲ್ಲಿ ಮನಮೋಹನ್ ಸಿಂಗ್ ಸರಕಾರ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿ ಆಡಳಿತ ಮೈತ್ರಿಕೂಟದ ಸದಸ್ಯ ರಿಂದಲೇ ಪ್ರತಿಭಟನೆಯ ನಡುವೆಯೇ ಬಿಜೆಪಿಯ ಬೆಂಬಲದಿಂದ ಮಸೂದೆಗೆ ಅಂಗೀಕಾರ ಪಡೆಯುತ್ತಾರೆ.
ಯುಪಿಎ ಸರಕಾರ ಆರ್‌ಜೆಡಿ ಸಮಾಜವಾದಿ ಪಕ್ಷಗಳ ಸಂಖ್ಯಾಬಲದ ಮೇಲೆ ಅವಲಂಬಿತವಾಗಿದ್ದ ಕಾರಣ ಮನಮೋಹನ್ ಸಿಂಗ್ ರವರು ಮಸೂದೆಯನ್ನು ಲೋಕಸಭೆಯಲ್ಲಿ ಅನುಮೋದನೆ ಪಡೆಯಲು ಮಂಡಿಸುವ ಗೋಜಿಗೆ ಹೋಗದ ಕಾರಣ 2015ರಲ್ಲಿ ಮಸೂದೆ ಅಧಿಕೃತವಾಗಿ ರದ್ದಾ ಯಿತು. ಆರು ಬಾರಿಯ ಪ್ರಯತ್ನವು ಮಹಿಳಾ ಮೀಸಲಾತಿ ಜಾರಿಗೆ ತರಲು ವಿಫಲವಾಗುತ್ತದೆ.
ಮಹಿಳಾ ಮಸೂದೆಯನ್ನು ಜಾರಿಗೆ ತರುವ ಪ್ರಯತ್ನವನ್ನು ನಾನಾ ಕುಂಟು ನೆಪಗಳನ್ನು ಒಡ್ಡಿ ಬಹುತೇಕ ಪ್ರಾದೇಶಿಕ ಪಕ್ಷಗಳು ಅಡ್ಡಿಪಡಿಸುತ್ತಿದ್ದವು. ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಒಳ ಮೀಸಲು ನೀಡಬೇಕು ಎಂದು ಒತ್ತಾಯ ಮಾಡುತ್ತಾರೆ.ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಹೊರತುಪಡಿಸಿ ಇತರರಿಗೆ ಮೀಸಲು ನೀಡಲು ಅವಕಾಶವಿಲ್ಲ. ಇದು ತಿಳಿದಿದ್ದರೂ ಸಹಾ ಮಸೂದೆಗೆ ಅಡ್ಡಿಪಡಿಸಲು ಇದನ್ನು ಅಸವನ್ನಾಗಿ ಬಳಸಲಾಗುತ್ತಿತ್ತು. ಏಳನೇಯ ಬಾರಿ ಮೋದಿ ಸರಕಾರವು 2023ರಲ್ಲಿ ನೂತನ ಸಂಸದ್ ಭವನದಲ್ಲಿ ಮೊದಲ ಮಸೂದೆಯಾಗಿ ನಾರಿ ವಂದನ್ ಅಧಿನಿಯಮದಡಿ ಸಂಸತ್ತಿನ ಉಭಯ ಸದನದಲ್ಲಿ ಅಂಗೀಕಾರ ಪಡೆಯುವುದಕ್ಕೆ ಯಶಸ್ವಿಯಾಗುತ್ತದೆ.









