(ನ್ಯೂಸ್ ಕಡಬ) newskadaba.com, ಎ.29 ಮದುವೆ ಸಾಮಾನ್ಯವಾಗಿ ಎರಡು ಜೀವಗಳು ಹೊಸ ಜೀವನಕ್ಕೆ ಕಾಲಿಡುವ ಶುಭಘಳಿಗೆ. ಆದರೆ ಈ ಒಂದು ಶುಭ ಸಮಾಚಾರಕ್ಕೆ ಯಾವುದೇ ವಿಘ್ನ ಬರಬಾರದು ಎಂಬ ಕಾರಣಕ್ಕೆ ಉತ್ತಮ ಸ್ಥಳವನ್ನು ಆರಿಸಿ ವಿವಾಹವಾಗುತ್ತಾರೆ. ಆದರೆ ಅಲ್ಮೋರಾದಲ್ಲಿ ವಿಚಿತ್ರ ಮದುವೆ ಸಮಾರಂಭ ಇದೀಗ ಚರ್ಚೆಗೆ ಗ್ರಾಸವಾಗಿದೆ.ಅಂತ್ಯಕ್ರಿಯೆ ನಡೆಯುವ ಸ್ಮಶಾನದಲ್ಲೇ ನವ ಜೋಡಿ ಮದುವೆಯಾಗಿರುವ ಘಟನೆ ಉತ್ತರಾಖಂಡದ ಅಲ್ಮೋರಾದಲ್ಲಿ ನಡೆದಿದೆ. ಉರಿಯುವ ಚಿತೆಗಳ ನಡುವೆ ಸಪ್ತಪದಿ ತುಳಿದ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಘಟನೆ ರಾಮಗಂಗಾ ನದಿ ಮತ್ತು ಬದನ್‌ಗಢ ನದಿಗಳ ಸಂಗಮ ಪ್ರದೇಶದಲ್ಲಿ ನಡೆದಿದೆ. ದಶಕಗಳಿಂದಲೂ ಈ ಸ್ಥಳವನ್ನು ಸುತ್ತಮುತ್ತಲಿನ ಗ್ರಾಮಸ್ಥರು ತಮ್ಮ ಪ್ರೀತಿಪಾತ್ರರ ಅಂತ್ಯಕ್ರಿಯೆ ನೆರವೇರಿಸುವ ಪವಿತ್ರ ಸ್ಮಶಾನವಾಗಿ ಬಳಸಿಕೊಂಡು ಬರುತ್ತಿದ್ದಾರೆ. ಆದರೆ, ಕಳೆದ ಭಾನುವಾರ ಈ ಸ್ಥಳ ಸಂಪೂರ್ಣವಾಗಿ ಮದುವೆ ಮಂಟಪವಾಗಿ ಮಾರ್ಪಟ್ಟಿತ್ತು.
ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿರುವ ಈ ರಮಣೀಯ ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸಿದೆ. ಹತ್ತಿರದ ರೆಸಾರ್ಟ್‌ನಲ್ಲಿ ತಂಗಿದ್ದ ಜೋಡಿ, ಸ್ಥಳದ ಸೌಂದರ್ಯಕ್ಕೆ ಮೋಹಗೊಂಡು ಸ್ಮಶಾನದಲ್ಲೇ ಮದುವೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ರೆಸಾರ್ಟ್ ವ್ಯವಸ್ಥಾಪಕ ರಾಕೇಶ್ ಶರ್ಮಾ ಅವರು, ಇದು ಸ್ಮಶಾನವಾಗಿರುವುದರಿಂದ ಇಲ್ಲಿ ಶುಭಕಾರ್ಯ ಮಾಡಬಾರದು ಎಂದು ಎಚ್ಚರಿಸಿದರೂ, ಅವರ ಮಾತು ಕಡೆಗಣಿಸಲಾಗಿದೆ.
ನದಿ ದಂಡೆಯಲ್ಲೇ ಮಂಟಪ ನಿರ್ಮಿಸಿ, ವಿದ್ಯುತ್ ದೀಪಗಳು ಹಾಗೂ ಹೂವಿನ ಅಲಂಕಾರಗಳೊಂದಿಗೆ ಮದುವೆ ಅದ್ದೂರಿಯಾಗಿ ನೆರವೇರಿಸಲಾಗಿದೆ. ಈ ಘಟನೆಯ ವೀಡಿಯೊಗಳು ವೈರಲ್ ಆಗುತ್ತಿದ್ದಂತೆಯೇ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರ್ವತ ಪ್ರದೇಶದ ಸಂಸ್ಕೃತಿಗೆ ಇದು ಧಕ್ಕೆ ತಂದ ಘಟನೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ್ ಸಿಂಗ್ ರಾವತ್ ಸೇರಿದಂತೆ ಅನೇಕರು ಈ ಕೃತ್ಯವನ್ನು ಖಂಡಿಸಿದ್ದು, “ಚಿತಾಗಾರವು ಪವಿತ್ರ ಸ್ಥಳ. ಇಲ್ಲಿ ಶುಭ ಕಾರ್ಯ ನಡೆಸುವುದು ನಿಷಿದ್ಧ. ಇದು ನಮ್ಮ ನಂಬಿಕೆಗಳಿಗೆ ಅವಮಾನ” ಎಂದು ಹೇಳಿದ್ದಾರೆ.
ಘಟನೆ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಆಡಳಿತ ಎಚ್ಚೆತ್ತುಕೊಂಡಿದೆ. ತಹಶೀಲ್ದಾರ್ ಅಬಿದ್ ಅಲಿ ಪ್ರತಿಕ್ರಿಯಿಸಿ, ಯಾವುದೇ ಸಾರ್ವಜನಿಕ ಸ್ಥಳ ಅಥವಾ ಸ್ಮಶಾನದಲ್ಲಿ ಅನುಮತಿಯಿಲ್ಲದೆ ಖಾಸಗಿ ಕಾರ್ಯಕ್ರಮ ನಡೆಸುವುದು ಕಾನೂನುಬಾಹಿರ ಎಂದು ಹೇಳಿದ್ದಾರೆ. ವೈರಲ್ ವೀಡಿಯೊ ಆಧರಿಸಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.









