(ನ್ಯೂಸ್ ಕಡಬ) newskadaba.com, ಎ.24: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಶೀಘ್ರದಲ್ಲೇ ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ‘ಕೋಟಕ್ ಇನ್‌ಸ್ಟಿಟ್ಯೂಷನಲ್ ಈಕ್ವಿಟೀಸ್’ ವರದಿ ಮಾಡಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ದೇಶದಲ್ಲಿ ಇಂಧನ ಬೆಲೆಗಳು ಏರಿಕೆಯಾಗಲಿವೆ ಎಂದು ವರದಿ ತಿಳಿಸಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 25 ರಿಂದ 28 ರೂಪಾಯಿ ವರೆಗೆ ಹೆಚ್ಚಿಸಬೇಕಾದ ಅನಿವಾರ್ಯತೆ ಇದೆ. ಆದರೆ, ಜನಸಾಮಾನ್ಯರ ಮೇಲಿನ ಹೊರೆ ತಪ್ಪಿಸಲು ಒಮ್ಮೆಗೆ ಬೆಲೆ ಏರಿಸುವ ಬದಲಿಗೆ ಹಂತ ಹಂತವಾಗಿ ಹೆಚ್ಚಿಸುವ ಸಾಧ್ಯತೆಯಿದೆ.
. ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ‘ಹಾರ್ಮುಜ್ ಜಲಸಂಧಿ’ಯ ಮೂಲಕ ನಡೆಯುವ ತೈಲ ವ್ಯಾಪಾರದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಇದರಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ಭಾರಿ ಏರಿಳಿತ ಕಂಡುಬರುತ್ತಿದೆ. ಸ್ಪಾಟ್ ಬೆಲೆ ಮತ್ತು ಫ್ಯೂಚರ್ಸ್ ಬೆಲೆಗಳ ನಡುವಿನ ವ್ಯತ್ಯಾಸ ಹೆಚ್ಚುತ್ತಿದ್ದು, ಇದು ತೈಲ ಪೂರೈಕೆಯ ಮೇಲೆ ಭಾರಿ ಒತ್ತಡವಿದೆ ಎಂಬುದನ್ನು ಸೂಚಿಸುತ್ತಿದೆ.
ತೈಲ ಕಂಪನಿಗಳ ಬೃಹತ್ ನಷ್ಟ
ಸದ್ಯದ ಪರಿಸ್ಥಿತಿಯಲ್ಲಿ ಕಚ್ಚಾ ತೈಲ ಬೆಲೆ ಏರಿದ್ದರೂ ಭಾರತದಲ್ಲಿ ಇಂಧನ ದರಗಳನ್ನು ಪರಿಷ್ಕರಿಸಿಲ್ಲ. ಇದು ತೈಲ ಸಂಸ್ಕರಣಾ ಕಂಪನಿಗಳಿಗೆ (Refineries) ಭಾರಿ ಆರ್ಥಿಕ ಹೊರೆಯಾಗುತ್ತಿದೆ. ಕಂಪನಿಗಳಿಗೆ ಪ್ರತಿ ತಿಂಗಳು ಸುಮಾರು 27,000 ಕೋಟಿ ರೂಪಾಯಿ ಹೆಚ್ಚುವರಿ ನಷ್ಟವಾಗುತ್ತಿದೆ. ಸರ್ಕಾರವು ಎಕ್ಸೈಸ್ ಸುಂಕದಲ್ಲಿ 10 ರೂಪಾಯಿ ವಿನಾಯಿತಿ ನೀಡಿದ್ದರೂ, ಅದು ಕಂಪನಿಗಳ ಈ ಬೃಹತ್ ನಷ್ಟವನ್ನು ಸರಿದೂಗಿಸಲು ಸಾಕಾಗುತ್ತಿಲ್ಲ.
ಏಪ್ರಿಲ್ 29ರ ನಂತರ ಬೆಲೆ ಪರಿಷ್ಕರಣೆ?
ರಾಜಕೀಯ ಕಾರಣಗಳಿಂದಾಗಿ ಬೆಲೆ ಏರಿಕೆಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಕೋಟಕ್ ಇಕ್ವಿಟೀಸ್ ವಿಶ್ಲೇಷಿಸಿದೆ. ಏಪ್ರಿಲ್ 29 ರಂದು ಅಂತಿಮ ಹಂತದ ಚುನಾವಣೆ ಮುಗಿದ ನಂತರ ಇಂಧನ ಬೆಲೆಗಳನ್ನು ಪರಿಷ್ಕರಿಸುವ ಸಾಧ್ಯತೆಯಿದೆ. ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ ಸುಮಾರು 120 ಡಾಲರ್ ತಲುಪಿರುವುದರಿಂದ, ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಸಣ್ಣ ಮೊತ್ತಗಳಲ್ಲಿ ಬೆಲೆ ಏರಿಕೆ ಮಾಡಲು ಕಂಪನಿಗಳು ನಿರ್ಧರಿಸಿವೆ.
ಬೆಲೆ ಏರಿಕೆ ಆಗೋದಿಲ್ಲ ಎಂದ ಕೇಂದ್ರ ಸರ್ಕಾರ
ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಚುನಾವಣೆಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದೆ ಎಂಬ ಯಾವುದೇ ವರದಿಗಳನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈಗ ನಿರಾಕರಿಸಿದೆ. ಭಾರತ ಸರ್ಕಾರವು ಅಂತಹ ವರದಿಗಳನ್ನು “ನಕಲಿ ಸುದ್ದಿ” ಎಂದು ಕರೆದಿದೆ ಮತ್ತು ಅವುಗಳನ್ನು ದಾರಿತಪ್ಪಿಸುವ ಮತ್ತು ಭೀತಿ ಹುಟ್ಟಿಸುವ ಸುದ್ದಿಗಳು ಎಂದೂ ಕರೆಯುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಸ್ಪಷ್ಟೀಕರಣವನ್ನು ಅಧಿಕೃತ ಹೇಳಿಕೆಯಾಗಿದೆ.









