(ನ್ಯೂಸ್ ಕಡಬ) newskadaba.com, ಎ.23: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಸಿಇಟಿ ಪರೀಕ್ಷೆ ಗುರುವಾರದಿಂದ ಆರಂಭಗೊಂಡಿದೆ. ಏಪ್ರಿಲ್ 23 ಮತ್ತು 24 ರಂದು ಪರೀಕ್ಷೆ ನಡೆಯಲಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಒಟ್ಟು 30,235 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ 40 ಕೇಂದ್ರಗಳಲ್ಲಿ ಒಟ್ಟು 21,489 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಮಂಗಳೂರಿನಲ್ಲಿ 25, ಮೂಡುಬಿದಿರೆಯಲ್ಲಿ 6, ಬೆಳ್ತಂಗಡಿಯಲ್ಲಿ 5 ಮತ್ತು ಪುತ್ತೂರಿನಲ್ಲಿ 4 ಕೇಂದ್ರಗಳನ್ನು ಗುರುತಿಸಲಾಗಿದೆ.ಉಡುಪಿ ಜಿಲ್ಲೆಯ 23 ಕೇಂದ್ರಗಳಲ್ಲಿ ಒಟ್ಟು 8,746 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಉಡುಪಿಯಲ್ಲಿ 11, ಕಾರ್ಕಳದಲ್ಲಿ 5 ಮತ್ತು ಕುಂದಾಪುರದಲ್ಲಿ 7 ಕೇಂದ್ರಗಳಿವೆ.
ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಲು ನೇಮಕಾತಿ ಪರೀಕ್ಷೆಗಳ ಮಾದರಿಯಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ‘ವೆಬ್‌ಕಾಸ್ಟಿಂಗ್’ ಮೂಲಕ ನೇರ ನಿಗಾ ಇರಿಸಲಾಗಿದೆ. ಅಭ್ಯರ್ಥಿಗಳ ಗುರುತು ಪತ್ತೆಗಾಗಿ ಹಾಲ್ ಟಿಕೆಟ್‌ನಲ್ಲಿರುವ ಕ್ಯೂಆರ್ ಕೋಡ್ ಮತ್ತು ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಪರೀಕ್ಷಾ ಅಕ್ರಮ ತಡೆಯಲು ಕೆಇಎ ಈ ಬಾರಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕಠಿಣ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎರಡು ಗಂಟೆ ಮೊದಲೇ ಹಾಜರಿರಬೇಕು. ಪುರುಷರಿಗೆ ಸರಳವಾದ ಅರ್ಧ ತೋಳಿನ ಶರ್ಟ್ (ಕಾಲರ್ ಇಲ್ಲದಿದ್ದರೆ ಉತ್ತಮ) ಮತ್ತು ಕನಿಷ್ಠ ಜೇಬುಗಳಿರುವ ಪ್ಯಾಂಟ್ ಧರಿಸಬೇಕು. ಕುರ್ತಾ-ಪೈಜಾಮ ಮತ್ತು ಜೀನ್ಸ್ ಧರಿಸುವಂತಿಲ್ಲ. ಇನ್ನು ಮಹಿಳೆಯರಿಗೆ ಸರಳವಾದ ಅರ್ಧ ತೋಳಿನ ಉಡುಪುಗಳನ್ನು ಧರಿಸಬೇಕು. ಶೂಗಳನ್ನು ಧರಿಸಿ ಬರುವಂತಿಲ್ಲ (ಚಪ್ಪಲಿ ಮಾತ್ರ ಅನುಮತಿಸಲಾಗಿದೆ). ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್‌ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಧಿಸಲಾಗಿದೆ.
ಒಬ್ಬರ ಬದಲಿಗೆ ಮತ್ತೊಬ್ಬರು ಪರೀಕ್ಷೆ ಬರೆಯುವುದನ್ನು (impersonation) ತಡೆಯಲು ಈ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷೆಯ ಸಂದರ್ಭದಲ್ಲಿ ಬಳಸಲಾಗುವ ಫೇಸ್ ರೆಕಗ್ನಿಷನ್ ಪ್ರಕ್ರಿಯೆಯನ್ನೇ ಸೀಟು ಹಂಚಿಕೆ ಮತ್ತು ಕಾಲೇಜು ಪ್ರವೇಶಾತಿ ಸಮಯದಲ್ಲೂ ಬಳಸಲಾಗುತ್ತದೆ.
“ಸಿಇಟಿ ಪರೀಕ್ಷೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಕಳೆದ ವರ್ಷ ವಸ್ತ್ರ ಸಂಹಿತೆ ವಿಚಾರದಲ್ಲಿ ಉಂಟಾಗಿದ್ದ ಗೊಂದಲಗಳನ್ನು ನಿವಾರಿಸಲು ಈ ಬಾರಿ ನೋಡಲ್ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಬಹುದು” ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದಾರೆ.








