(ನ್ಯೂಸ್ ಕಡಬ) newskadaba.com, ಎ.22: ನಗರದಲ್ಲಿ ಬೆಳಗಿನ ಜಾವ ಭಾರೀ ಗಾಳಿಯೊಂದಿಗೆ ಸುರಿದ ಮಳೆಗೆ ಬೃಹತ್ ಮರದ ಕೊಂಬೆ ಮುರಿದು ಬಿದ್ದು ಮನೆ, ವಾಹನಗಳಿಗೆ ಹಾನಿಯಾದ ಘಟನೆ ನಡೆದಿದೆ.
ನಗರದ ಚಮ್ಮಾರ ಗಲ್ಲಿ, ಬಸವನಗುಡಿ ಬಳಿಯ ಅಶ್ವಥ ಕಟ್ಟೆಯಲ್ಲಿ ಬೆಳಗಿನ ಜಾವ ಸುಮಾರು 3:30ಕ್ಕೆ ಈ ಘಟನೆ ಸಂಭವಿಸಿದೆ. ಅಶ್ವಥ ಕಟ್ಟೆ ಯಲ್ಲಿದ್ದ ಬೃಹತ್ ಅಶ್ವಥ ಮರದ ಕೊಂಬೆ ಏಕಾಏಕಿ ಮುರಿದು ಬಿದ್ದಿದೆ. ಮುರಿದ ಕೊಂಬೆ, ಹತ್ತಿರದಲ್ಲಿದ್ದ ಎರಡು ಮನೆಗಳ ಮೇಲೆ ಬಿದ್ದು, ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಜೊತೆಗೆ ಮೂರು ದ್ವಿಚಕ್ರ ವಾಹನಗಳ ಮೇಲೆ ಬಿದ್ದ ಪರಿಣಾಮ ಅವುಗಳಲ್ಲಿ ಎರಡು ವಾಹನಗಳು ಸಂಪೂರ್ಣವಾಗಿ ನಜ್ಜುಗುಜ್ಜಾಗಿವೆ.
ಘಟನೆ ಸಮಯದಲ್ಲಿ ನಿವಾಸಿಗಳು ಮನೆಯೊಳಗೆ ಇದ್ದುದರಿಂದ ಯಾವುದೇ ಸಾವುನೋವು ಅಥವಾ ಗಾಯಗಳು ಸಂಭವಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಿಂದ ಸ್ಥಳೀಯ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಸ್ಥಳೀಯರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅವಶೇಷಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಮಂಗಳೂರು ಪೊಲೀಸ್ ಇಲಾಖೆ ಮತ್ತು ಸ್ಥಳೀಯ ಆಡಳಿತ ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಸಂಚಾರ ಸುಗಮಗೊಳಿಸುವ ಕಾರ್ಯ ನಡೆಯುತ್ತಿದೆ.









