ಹೆಣ ಇಡಲೂ ಹಣ ಕೊಡಬೇಕು – ಇಲ್ಲಿ ಸ್ಮಶಾನಕ್ಕೂ ಬಾಡಿಗೆ!



(ನ್ಯೂಸ್‌ ಕಡಬ) newskadaba.com,  .21: ಇಂದು ವಿಶೇಷವಾಗಿ ಬೆಂಗಳೂರು ಮಹಾನಗರಗಳಲ್ಲಿ ಅಥವಾ ಇತರೆಡೆ ಜೀವನಕ್ಕಾಗಿ ಮನೆ ಬಾಡಿಗೆ ಪಡೆಯೋದು ಸಾಮಾನ್ಯವಾಗಿದ್ದರೂ, ಭೂಮಿಯ ಮತ್ತೊಂದು ಭಾಗದಲ್ಲಿ ಸಾವಿನ ನಂತರವೂ “ಬಾಡಿಗೆ ವ್ಯವಸ್ಥೆ” ಇರುವ ವಿಚಿತ್ರ ಸಂಪ್ರದಾಯವೊಂದು ಅಸ್ತಿತ್ವದಲ್ಲಿದೆ.







ಈ ವಿಶಿಷ್ಟ ಪದ್ಧತಿ ಇರುವ ಸ್ಥಳ ಬೊಲಿವಿಯ ಲಾ ಪಾಜ್‌ನಲ್ಲಿರುವ ಸಿಮೆಂಟೇರಿಯೋ ಜನರಲ್ ಎಂಬ ವಿಶ್ವದ ಅತಿದೊಡ್ಡ ಬಾಡಿಗೆ ಸ್ಮಶಾನ. ಇಲ್ಲಿ ಜನರು ತಮ್ಮ ಕುಟುಂಬ ಸದಸ್ಯರ ಅಂತ್ಯಕ್ರಿಯೆಯ ನಂತರ ಸಮಾಧಿ ಸ್ಥಳವನ್ನು ನಿರ್ದಿಷ್ಟ ಅವಧಿಗೆ ಬಾಡಿಗೆಗೆ ಪಡೆಯುತ್ತಾರೆ. ಆರಂಭದಲ್ಲಿ ಸಾಮಾನ್ಯವಾಗಿ 5 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗುತ್ತದೆ. ನಂತರ ಅವಧಿ ವಿಸ್ತರಣೆಗಾಗಿ ನಿರಂತರ ಬಾಡಿಗೆ ಪಾವತಿ ಮಾಡಬೇಕಾಗುತ್ತದೆ.






ಈ ಸ್ಮಶಾನದಲ್ಲಿ ಎರಡು ವಿಧದ ವ್ಯವಸ್ಥೆಗಳು ಇವೆ. ಒಂದು, ಸಾಂಪ್ರದಾಯಿಕ ರೀತಿಯಲ್ಲಿ ಶವಗಳನ್ನು ಭೂಮಿಯಲ್ಲಿ ಹೂಳುವುದು. ಮತ್ತೊಂದು, ನಿರ್ದಿಷ್ಟ ಗೂಡುಗಳು ಅಥವಾ ಗೋಡೆಗಳಲ್ಲಿನ ಕಮಾನುಗಳಲ್ಲಿ ಚಿತಾಭಸ್ಮ ಮತ್ತು ಮೂಳೆ ಅವಶೇಷಗಳನ್ನು ಸಂಗ್ರಹಿಸುವ ವ್ಯವಸ್ಥೆ.

ಅವಧಿ ಮುಗಿದ ಬಳಿಕ ಶವಗಳನ್ನು ಹೊರತೆಗೆದು ದಹನ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ನಂತರ ಚಿತಾಭಸ್ಮವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ. ಸಿಮೆಂಟೇರಿಯೋ ಜನರಲ್ ಸುಮಾರು 210 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ ಎಂದು ಹೇಳಲಾಗಿದ್ದು, ಇಲ್ಲಿ ಲಕ್ಷಾಂತರ ಜನರ ಅವಶೇಷಗಳು ಸಂಗ್ರಹವಾಗಿವೆ. ಪ್ರತಿ ವರ್ಷ ಸುಮಾರು 50 ಸಾವಿರ ಅಂತ್ಯಕ್ರಿಯೆಗಳನ್ನು ನಿರ್ವಹಿಸಲಾಗುತ್ತದೆ ಎಂಬ ಮಾಹಿತಿ ಇದೆ.

ಇಲ್ಲಿನ ಸ್ಮಶಾನ ಗೋಡೆಗಳಲ್ಲಿ ಇರುವ ಗೂಡುಗಳು ಮತ್ತು ಗಾಜಿನ ಕಮಾನುಗಳು ಅಪಾರ್ಟ್‌ಮೆಂಟ್ ಶೈಲಿಯಲ್ಲಿದ್ದು, ಜನರು ಅವುಗಳನ್ನು ಬಾಡಿಗೆಗೆ ಪಡೆದು ತಮ್ಮ ಪ್ರೀತಿಪಾತ್ರರ ನೆನಪನ್ನು ಸಂರಕ್ಷಿಸುತ್ತಾರೆ. ಸ್ಥಳೀಯ ಜನರಲ್ಲಿ ಇದು ಕೇವಲ ಅಂತ್ಯಕ್ರಿಯೆಯ ವ್ಯವಸ್ಥೆಯಲ್ಲ, ಬದಲಾಗಿ ಪ್ರೀತಿಪಾತ್ರರೊಂದಿಗೆ ನಂಟನ್ನು ಮುಂದುವರಿಸುವ ಭಾವನಾತ್ಮಕ ಸಂಪ್ರದಾಯವಾಗಿದೆ.

error: Content is protected !!
Scroll to Top