ಪುತ್ತೂರು: ಜಾತ್ರೆ ಜತೆಗೆ ಬಿಸು ಸಂಭ್ರಮ



(ನ್ಯೂಸ್‌ ಕಡಬ) newskadaba.com,  .15  ಪುತ್ತೂರು: ತುಳುನಾಡಿನಲ್ಲಿ ಹೊಸ ವರ್ಷವನ್ನು ಸೌರಮಾನ ಯುಗಾದಿ ದಿನದಿಂದ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಜಾತ್ರಾ ಉತ್ಸವದೊಂದಿಗೆ ವಿಷು ಕಣಿ ಸಂಭ್ರಮ ಎ.೧೫ ರಂದು ವಿಶೇಷವಾಗಿ ಸಾಂಪ್ರದಾಯಿಕ ನೆಲೆಯಲ್ಲಿ ಧಾರ್ಮಿಕ ಆಚರಣೆಗಳು ನಡೆಯಲಿವೆ.
ಮಳೆಗಾಗಿಯೂ ಪ್ರಾರ್ಥನೆ
ಮೇಷ ಸಂಕ್ರಮಣದ ದಿನ ರಾತ್ರಿ ದೇವರ ದೈನಂದಿನ ಪೇಟೆ ಸವಾರಿ ಮುಗಿದು, ದೇವಾಲಯದ ಆಡಳಿತದವರು, ಭಕ್ತಾಧಿಗಳು ಸೇರಿ ಕಾಲ ಕಾಲಕ್ಕೆ ಮಳೆ-ಬೆಳೆ ಸಮೃದ್ಧಿಯಾಗಿ ಸುಭಿಕ್ಷೆ ಉಂಟಾಗಲಿ ಎಂದು ದೇವಳದ ತಂತ್ರಿಗಳ ಮೂಲಕ ದೇವರ ಸತ್ಯ ಧರ್ಮ ನಡೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಫಲಪುಷ್ಪಾದಿ ಸುವಸ್ತುಗಳನ್ನು ದರ್ಪಣ ಸಹಿತ ಗರ್ಭಗುಡಿಯಲ್ಲಿ ಇರಿಸಿ ಬಾಗಿಲು ಮುಚ್ಚಲಾಗುತ್ತದೆ.
ವಿಷು (ಬಿಸು)ವಿನ ದಿನ ಪ್ರಾತಃಕಾಲದಲ್ಲಿ ದೇವರ ಗರ್ಭಗುಡಿಯ ಬಾಗಿಲು ತೆಗೆದು ದರ್ಪಣ ಬಿಂಬ ದರ್ಶನವಾಗುತ್ತದೆ. ದೇವಾಲಯದ ಒಳಾಂಗಣದ ಸಾಂಪ್ರದಾಯಿಕ ಚಪ್ಪರದ ಕಂಬಗಳನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗುತ್ತದೆ ಮತ್ತು ದೇವರು ಬಂದು ನಿಲ್ಲುವ ಕೊಡಿಮರದ ಬಲ ಭಾಗದಲ್ಲಿ ಚಪ್ಪರಕ್ಕೆ ಮೇಲ್ಕಾಪು ಹಾಸಲಾಗುತ್ತದೆ.
ಚಂದ್ರಮಂಡಲ ಉತ್ಸವ
ಸೌರ ಯುಗಾದಿ ವಿಷುಕಣಿ ಅಂಗವಾಗಿ ದೇವಾಲಯದ ಒಳಾಂಗಣದಲ್ಲಿ ಬೆಳಗ್ಗೆ ವಿಶೇಷ ಉತ್ಸವ ಬಲಿ, ವಸಂತ ಕಟ್ಟೆಪೂಜೆ ನಡೆಯಲಿದೆ. ಸಂಜೆ ತುಳು ಪಂಚಾಂಗ ಸಂಪ್ರದಾಯದಂತೆ ದೇವಾಲಯದ ಹೊರಾಂಗಣದಲ್ಲಿ ‘ಬಯ್ಯದ ಬಲಿ’ (ಸಂಜೆಯ ಉತ್ಸವ) ನಡೆದು ಬಳಿಕ ದೇವರ ಸಾಂಪ್ರದಾಯಿಕ ಚಂದ್ರ ಮಂಡಲ ಉತ್ಸವ (ಬಂಡಿ ಉತ್ಸವ) ನಡೆಯುತ್ತದೆ.
ದೇವಾಲಯದಲ್ಲಿ ಶತಮಾನಗಳ ಹಿಂದೆ ಬಂಡಿಯ ಪೀಠದಲ್ಲಿ ದೇವರ ಉತ್ಸವ ಮೂರ್ತಿಯನ್ನು ಕುಳ್ಳಿರಿಸಿ ಹೊರಾಂಗಣದಲ್ಲಿ ಎಳೆಯಲಾಗುತ್ತಿತ್ತು. ಚಂದ್ರಮಂಡಲ ರಥವನ್ನು ನಿರ್ಮಿಸಿದ ಬಳಿಕ ಚಂದ್ರಮಂಡಲ ರಥ ಉತ್ಸವ ನಡೆಯುತ್ತದೆ. ಪುತ್ತೂರು ಸೀಮೆಯ ಜನರು ಇದನ್ನು ಬಂಡಿ ಉತ್ಸವ ಎಂದು ಕರೆಯುವುದು ರೂಢಿಯಾಗಿದೆ.
ವಿಶೇಷ ಊಟ
ವಿಷುಕಣಿಯ ಅಂಗವಾಗಿ ಮಧ್ಯಾಹ್ನ ದೇವಾಲಯದಲ್ಲಿ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆಯಲ್ಲಿ ವಿಷುಹಬ್ಬದ ಪ್ರಯುಕ್ತ ವಿಶೇಷ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಮನೆಗಳಲ್ಲಿ ಸೌರಯುಗಾದಿ ಆಚರಣೆ ಇದ್ದರೂ ಕನಿಷ್ಟ ಒಬ್ಬ ಸದಸ್ಯ ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುವ ವಿಷು ಊಟದಲ್ಲಿ ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸುವುದು ವಿಶೇಷತೆಯಾಗಿದೆ.
ಇಂದು ಪೇಟೆ ಸವಾರಿ
ಎ. ೧೫ ರ ರಾತ್ರಿ ಉತ್ಸವ, ಬಂಡಿ ಉತ್ಸವ, ಬನ್ನೂರು, ಅಶೋಕನಗರ, ರೈಲ್ವೇ ಮಾರ್ಗ ಸವಾರಿ ನಡೆಯಲಿದೆ.







error: Content is protected !!
Scroll to Top